ಅಭಿಶೇಕ್ ಅಂಬರೀಶ್ ಅಭಿನಯದ ಪ್ರಥಮ ಸಿನಿಮಾ ‘ಅಮರ್’ ಡಾ. ಅಂಬರೀಶ್ ಅವರ ಜನುಮ ದಿನವಾದ ಮೇ. 29 ರಂದು ಬಿಡುಗಡೆ ಮಾಡಲು ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಧರಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ರಿಲೀಸ್ ಡೇಟ್ ಅನೌನ್ಸ್ ಮಾಡಲು ಚಿತ್ರತಂಡ ರೆಡಿಯಾಗಿತ್ತು. ಆದರೆ, ಸಂದೇಶ್ ನಾಗರಾಜ್ ಅವರ ಅನುಪಸ್ಥಿತಿ ಕಾರಣ ‘ಅಮರ್’ ಚಿತ್ರದ ಸುದ್ದಿಗೋಷ್ಠಿಯನ್ನು ಮುಂದೂಡಲಾಗಿದೆ. ಮೈಸೂರಿನಲ್ಲಿ ಒಂದು ಜಾತ್ರೆ ನಡೆಯುತ್ತಿದೆ. ಅದರಲ್ಲಿ ನಮ್ಮ ಕುಟುಂಬದವರೆಲ್ಲ ಇರಬೇಕು. ಅದು ಮನೆ ದೇವರ ಜಾತ್ರೆಯಾಗಿದೆ. ಹಾಗಾಗಿ ಇಂದು ಸುದ್ದಿಗೋಷ್ಠಿ ಬೇಡ ಎಂದು ಸಂದೇಶ್ ನಾಗರಾಜ್ ಹೇಳಿದ್ದಾರೆ.
ಅಪ್ಪನ ಹುಟ್ಟು ಹಬ್ಬದಂದೇ ಮಗನ ಸಿನಿಮಾ ರಿಲೀಸ್ ಆಗುತ್ತಿರುವುದು ಸಂತೋಷದ ವಿಷಯ. ಆದರೆ, ಅಂಬರೀಶ್ ಅವರು ಮಗನ ಸಿನಿಮಾ ಬಿಡುಗಡೆ ಮುಂಚೆಯೇ ಈ ಲೋಕವನ್ನು ತ್ಯಜಿಸಿರುವುದು ಬೇಸರ ತರಿಸಿದೆ. ರಫ್ ಕಟ್ ಸಿನಿಮಾವನ್ನು ಡಾ. ಅಂಬಿ ಅವರು ನೋಡಿದ್ದು, ಮಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವರ್ಷದ ಮೇ ತಿಂಗಳು ಸುಮಲತಾ ಅಂಬರೀಶ್ ಅವರಿಗೆ ಬಹಳ ಮಹತ್ತರವಾದ ತಿಂಗಳಾಗಿದೆ. ಕಾರಣ ಮೇ. 23 ರಂದು ಅವರ ಮಂಡ್ಯ ಲೋಕಸಭಾ ಚುನಾವಣೆ ಫಲಿತಾಂಶ ಬರಲಿದೆ. ಮೇ. 24 ಅವರ ಅಭಿನಯದ ‘ಡಾಟರ್ ಆಫ್ ಪಾರ್ವತಮ್ಮ’ ಸಿನಿಮಾ ಬಿಡುಗಡೆ ಆಗಲಿದೆ, ಇನ್ನೂ ಮೇ. 29 ರಂದು ಮಗನ ಮೊದಲ ಸಿನಿಮಾ ‘ಅಮರ್’ ಬಿಡುಗಡೆ ಆಗುತ್ತಿದೆ.
'ಅಮರ್' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಅಭಿನಯಿಸಿದ್ದು, ತಾನ್ಯ ಹೋಪ್ ಚಿತ್ರದ ಕಥಾನಾಯಕಿ ಆಗಿದ್ದಾರೆ. ಕನ್ನಡದ ಹ್ಯಾಟ್ರಿಕ್ ನಿರ್ದೇಶಕ ಎಂದು ಗುರುತಿಸಿಕೊಂಡಿರುವ ನಾಗಶೇಖರ್ ‘ಅಮರ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಪೋಷಕ ಪಾತ್ರಗಳಲ್ಲಿ ಸುಧಾರಾಣಿ, ದೇವರಾಜ್, ದೀಪಕ್ ಶೆಟ್ಟಿ, ಅರುಣ್ ಸಾಗರ್, ಚಿಕ್ಕಣ್ಣ, ಸಾಧು ಕೋಕಿಲ, ನಿರೂಪ್ ಭಂಡಾರಿ ಸಹ ಇದ್ದಾರೆ.