ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ಬಣ್ಣದ ಗೆಜ್ಜೆ' ಚಿತ್ರದಲ್ಲಿ 'ಸ್ವಾತಿ ಮುತ್ತಿನ ಮಳೆಹನಿಯೇ...ಮೆಲ್ಲ ಮೆಲ್ಲನೆ ಧರೆಗಿಳಿಯೆ' ಎಂದು ಹಾಡಿ ಕುಣಿದ ನಟಿ ಅಮಲ ಯಾರಿಗೆ ಗೊತ್ತಿಲ್ಲ..? ಬಣ್ಣದ ಗೆಜ್ಜೆ ನಂತರ 'ಬೆಳ್ಳಿಯಪ್ಪ ಬಂಗಾರಪ್ಪ ', 'ಕ್ಷೀರ ಸಾಗರ ' , 'ಪುಷ್ಪಕ ವಿಮಾನ ' ಸಿನಿಮಾಗಳಲ್ಲಿ ಮಿಂಚಿದ ನಟಿ ಕನ್ನಡಿಗರಿಗೆ ಬಹಳ ಚೆನ್ನಾಗಿ ಪರಿಚಯ.

ತೆಲುಗು ಸ್ಟಾರ್, ಅಕ್ಕಿನೇನಿ ನಾಗಾರ್ಜುನ ಅವರನ್ನು ಪ್ರೀತಿಸಿ ಮದುವೆಯಾದ ನಂತರ ಅಮಲ ಮತ್ತೆ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಆಗಾಗ್ಗೆ ಪತಿ ನಾಗಾರ್ಜುನ, ಪುತ್ರರಾದ ನಾಗ ಚೈತನ್ಯ, ಅಖಿಲ್ ಹಾಗೂ ಸೊಸೆ ಸಮಂತಾ ಸಿನಿಮಾ ಫಂಕ್ಷನ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅಮಲ, ಇದೀಗ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಆದರೆ ಅದು ತೆಲುಗು ಸಿನಿಮಾಗಾಗಿ. ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆ ತಯಾರಿಸುತ್ತಿರುವ ಸಿನಿಮಾವೊಂದರಲ್ಲಿ ಅಮಲ ನಾಯಕನ ತಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಶರ್ವಾನಂದ್ ಹಾಗೂ ರೀತುವರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮುಂದಿನ ಏಪ್ರಿಲ್ನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಚಿತ್ರವನ್ನು ತರುಣ್ ಭಾಸ್ಕರ್ ನಿರ್ದೇಶಿಸುತ್ತಿದ್ದಾರೆ. ವೆನ್ನಿಲ ಕಿಶೋರ್, ನಾಜರ್, ಪ್ರಿಯದರ್ಶಿ ಹಾಗೂ ಇನ್ನಿತರರು ಸಿನಿಮಾ ತಾರಾಗಣದಲ್ಲಿದ್ದಾರೆ.
