ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯಕ್ಕೆ ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಹಾಗೂ ಎಂ.ಡಿ. ಶ್ರೀಧರ್ ನಿರ್ದೇಶನದ ಒಡೆಯ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇವರೆಡು ಕಮರ್ಷಿಯಲ್ ಸಿನಿಮಾಗಳ ನಂತರ ದರ್ಶನ್ ಐತಿಹಾಸಿಕ ಸಿನಿಮಾ ಮಾಡಲಿದ್ದಾರೆ.
ಐತಿಹಾಸಿಕ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'ನಂತರ ಪೌರಾಣಿಕ ಚಿತ್ರವಾದ 'ಕುರುಕ್ಷೇತ್ರ'ದಲ್ಲಿ ದರ್ಶನ್ ಮಿಂಚಿದ್ದು ಇದೀಗ ಮತ್ತೊಮ್ಮೆ ಐತಿಹಾಸಿಕ ಚಿತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ. ಚಿತ್ರದುರ್ಗದ ಗಂಡುಗಲಿ ಮದಕರಿ ನಾಯಕನ ಜೀವನ ಚರಿತ್ರೆ ಆಧಾರಿತ ಸಿನಿಮಾ ಇದಾಗಿದ್ದು ಖ್ಯಾತ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಚಿತ್ರದ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ. ರಾಕ್ಲೈನ್ ವೆಂಕಟೇಶ್ ಈ ಸಿನಿಮಾವನ್ನು ನಿರ್ಮಿಸಲಿದ್ದಾರೆ. ರಾಬರ್ಟ್ ಬಿಡುಗಡೆಗೂ ಮುನ್ನ ಈ ಸಿನಿಮಾ ಸೆಟ್ಟೇರಲಿದೆ. ಚೆನ್ನೈ ಹಾಗೂ ಹೈದರಾಬಾದ್ನ ಕೆಲವು ಬರಹಗಾರರು ಈ ಐತಿಹಾಸಿಕ ಸಿನಿಮಾದ ಚಿತ್ರಕಥೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ನಾದಬ್ರಹ್ಮ ಹಂಸಲೇಖ ಚಿತ್ರದ ಹಾಡುಗಳಿಗೆ ಸಂಗೀತ ನೀಡಲಿದ್ದಾರೆ. ಚಿತ್ರಕ್ಕೆ ಅಶೋಕ್ ಕಶ್ಯಪ್ ಛಾಯಾಗ್ರಹಣವಿದ್ದು ದೊಡ್ಡಣ್ಣ, ಶ್ರೀನಿವಾಸಮೂರ್ತಿ ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಲಿದ್ದಾರೆ.