ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್‍ಗೆ ಒಂದರ ಹಿಂದೊಂದರಂತೆ ಅವಕಾಶಗಳು ಹುಡುಕಿ ಬರುತ್ತಿವೆ. ಈಗ ಅವರು ಬಳ್ಳಾರಿ ದರ್ಬಾರ್ ಖ್ಯಾತಿಯ ಸ್ಮೈಲ್ ಶ್ರೀನು ನಿರ್ದೇಶಿಸುತ್ತಿರುವ ಹೊಸ ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ.ಈ ಹಿಂದೆ ತೂಫಾನ್, ಬಳ್ಳಾರಿ ದರ್ಬಾರ್ ಹಾಗೂ 18 ಟು 25 ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಮೈಲ್‍ಶ್ರೀನು ಈಗ ಮತ್ತೊಂದು ವಿಭಿನ್ನ ಪ್ರೇಮಕಥೆಯನ್ನು ತೆರೆಮೇಲೆ ತರಲು ಹೊರಟಿದ್ದಾರೆ.
ತಮ್ಮ ಹೊಸ ಚಿತ್ರಕ್ಕೆ ಸ್ಮೈಲ್ ಸೀನು 'ಓ ಮೈ ಲವ್' ಎಂಬ ಶೀರ್ಷಿಕೆಯನ್ನು ಫೈನಲ್ ಮಾಡಿದ್ದಾರೆ. ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಹದಿಹರೆಯದ ವಯಸಿನಲ್ಲಿ ಯುವ ಹೃದಯಗಳ ಮನದಲ್ಲಿ ಉಂಟಾಗುವ ತಳಮಳ, ಪ್ರೀತಿ, ಪ್ರೇಮ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಹೇಳಲಾಗಿದೆ. ರಾಮಾಂಜನಿ ಎನ್ನುವವರು ಈ ಚಿತ್ರದ ಕಥೆ ಬರೆಯುವುದರೊಂದಿಗೆ ಜಿಸಿಬಿ ಪ್ರೊಡಕ್ಷನ್ಸ್ ಮೂಲಕ ಚಿತ್ರ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕರೇ ರಚಿಸಿದ್ದಾರೆ. ರೊಮ್ಯಾಂಟಿಕ್ ಲವ್‍ಸ್ಟೋರಿ ಜೊತೆಗೆ ಕೌಟುಂಬಿಕ ಹಾಗೂ ಹಾಸ್ಯ ಮಿಶ್ರಣ ಹೊಂದಿದೆ ಈ ಸಿನಿಮಾ.
ಇದನ್ನೂ ಓದು: ಧನ್ವೀರ್ ಅಭಿನಯದ ಹೊಸ ಸಿನಿಮಾ ಚಿತ್ರೀಕರಣ ಮುಂದೂಡಿದ ಚಿತ್ರತಂಡ
ಇದೊಂದು ಬಿಗ್ ಬಜೆಟ್ ಸಿನಿಮಾವಾಗಿದ್ದು ಮೇಕಿಂಗ್, ಹಾಡುಗಳು, ತಾರಾಗಣ ಎಲ್ಲದರಲ್ಲೂ ಅದ್ದೂರಿತನ ಎದ್ದು ಕಾಣುತ್ತಿದೆ. ಈ ಚಿತ್ರದಲ್ಲಿ ಅಕ್ಷಿತ್ ಶಶಿಕುಮಾರ್ ಜೊತೆ ನಾಯಕಿಯಾಗಿ ಕೀರ್ತಿ ಕಲಕೇರಿ ಅಭಿನಯಿಸುತ್ತಿದ್ದಾರೆ. ಸಾಧು ಕೋಕಿಲಾ, ದೀಪಿಕಾ ಆರಾಧ್ಯ ಸೇರಿದಂತೆ ಇನ್ನಿತರರು ಈ ಚಿತ್ರದಲ್ಲಿದ್ದಾರೆ. ಡಾ.ವಿ. ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ಚರಣ್ ಅರ್ಜುನ್ ಅವರ ಸಂಗೀತ, ರಿಯಲ್ ಸತೀಶ್ ಅವರ ಸಾಹಸ ನಿರ್ದೇಶನ, ಆಕಾಶ್‍ಕುಮಾರ್ ಚವನ್ ಅವರ ಸಹ ನಿರ್ದೇಶನ ಈ ಚಿತ್ರಕ್ಕೆ ಇರಲಿದೆ. ಬೆಂಗಳೂರು, ಮಂಗಳೂರು, ಮಡಿಕೇರಿ, ಹೈದರಾಬಾದ್ ಸೇರಿದಂತೆ ಕರ್ನಾಟಕದ ಸುಂದರ ತಾಣಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ.