ಸ್ಯಾಂಡಲ್ವುಡ್ನಲ್ಲಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಿರುವ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಸಂಸ್ಥೆ ಈಗ ಮತ್ತೊಂದು ಹೊಸ ಚಿತ್ರಕ್ಕೆ ಸಜ್ಜಾಗಿದೆ. ಇಂದು ಚಿತ್ರದ ಮುಹೂರ್ತ ಸಮಾರಂಭ ಸರಳವಾಗಿ ನೇರವೇರಿದೆ.
ಇಂದು ನಿರ್ಮಾಪಕ ಟಿ.ಆರ್. ಚಂದ್ರಶೇಖರ್ ಅವರ ಹುಟ್ಟುಹಬ್ಬವಾಗಿದ್ದು, ಈ ವಿಶೇಷ ದಿನದಂದು ಇನ್ನೂ ಹೆಸರಿಡದ 'PRODUCTION NO 7' ಹೆಸರಿನ ಸಿನಿಮಾ ಇಂದು ಹೊಸಕೆರೆ ಹಳ್ಳಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯದಲ್ಲಿ ಸೆಟ್ಟೇರಿತು. ಇನ್ನು ಈ ಸಿನಿಮಾದಲ್ಲಿ ಅಜಯ್ ರಾವ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸ್ಯಾಂಡಲ್ವುಡ್ ಕೃಷ್ಣನ ಜೊತೆ ರಾಧೆಯಾಗಿ 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಖ್ಯಾತಿಯ ಸಂಜನಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ಕೌಟುಂಬಿಕ ಮತ್ತು ಹಾಸ್ಯ ಪ್ರಧಾನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನವನಿರ್ದೇಶಕ ಜಾಕಿ (ತಿಮ್ಮೇಗೌಡ) ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದ್ದು ,ಮುಖ್ಯ ಭೂಮಿಕೆಯಲ್ಲಿ ಮುನಿರಾಜ್, ತಬಲಾ ನಾಣಿ , ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ , ಗಿರಿ, ಅರುಣಾ ಬಾಲರಾಜ್ ಇದ್ದಾರೆ. ಚಿತ್ರರಂಗದ ಸಾಕಷ್ಟು ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಜೂನ್ 10 ರಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎಂದು ಚಿತ್ರತಂಡ ಹೇಳಿದೆ.