ಪಾರಿಜಾತ ಸಿನಿಮಾ ಮೂಲಕ ಕನ್ನಡಿಗರ ಮನೆ ಮಾತಾಗಿರುವ ನಟಿ ಐಂದ್ರಿತಾ ರೇ ಮದುವೆಯಾದ ಬಳಿಕ ಚಿತ್ರರಂಗದಿಂದ ಸ್ವಲ್ಪ ದೂರ ಇದ್ದಾರೆ. ಲಾಕ್‍ಡೌನ್ ಸಮಯದಲ್ಲಿ ಐಂದ್ರಿತಾ ರೇ ಹಾಗೂ ದಿಗಂತ್ ಕುಟುಂಬದವರು ಫುಲ್ ಎಂಜಾಯ್ ಮಾಡುತ್ತಿದ್ದು, ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ.
ಸದ್ಯ ಮಡಿಕೇರಿಗೆ ತೆರಳಿರುವ ಈ ಜೋಡಿ, ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ವಿಶೇಷವಾಗಿ ಬೆಟ್ಟ, ಗುಡ್ಡಗಳ ಪ್ರದೇಶಗಳಿಗೆ ತೆರಳುತ್ತಿದ್ದು, ಸಾಹಸಮಯ ಸ್ಟಂಟ್ ಮಾಡುತ್ತಿದ್ದಾರೆ. ಸದ್ಯ, ಆ್ಯಂಡಿ ದೊಡ್ಡ ಬಂಡೆಗಳನ್ನ ಏರುತ್ತಿರುವ ವಿಡಿಯೋ ಒಂದನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಅಭಿಮಾನಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತು ಇನ್‍ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿರುವ ಆ್ಯಂಡಿ, ನಿಜವಾಗಿಯೂ ಇದು ತುಂಬಾ ಕಠಿಣ, ಇದು ನನ್ನ ಮೂರನೇ ಪ್ರಯತ್ನ. ಹಗ್ಗ ಹಾಗೂ ಯಾವುದೇ ಸುರಕ್ಷತಾ ಪರಿಕರಗಳಿಲ್ಲದೆ ಹತ್ತಿದ್ದಕ್ಕೆ ಒಂದು ಕ್ಷಣ ಹೃದಯದ ಬಡಿತವೇ ನಿಂತಂತಾಯಿತು. ಆದರೆ, ಇದೆಲ್ಲ ಮಾಡುವುದಕ್ಕೆ ಸಾಧ್ಯವಾಗಿದ್ದು, ಇವರಿಂದಲೇ ಎಂದು ಪತಿ ದಿಗಂತ್ ಸೇರಿದಂತೆ ನಾಲ್ವರನ್ನು ಟ್ಯಾಗ್ ಮಾಡಿದ್ದಾರೆ. ಇವರ ಪ್ರೋತ್ಸಾಹದಿಂದಲೇ ಪೂರ್ತಿ ಮೇಲಕ್ಕೆ ಹತ್ತಲು ಸಾಧ್ಯವಾಯಿತು. ಮೇಲೆ ಹೋದಾಗ ತುಂಬಾ ಸಂತೋಷವಾಯಿತು ಹೇಳಿದ್ದಾರೆ.