ಇದು ಧಾರಾವಾಹಿಗಳ ಡಬ್ಬಿಂಗ್ ಹಾಗೂ ರಿಮೇಕ್ ಕಾಲ. ಹಿಂದಿಯಿಂದ ಕನ್ನಡಕ್ಕೆ, ಕನ್ನಡದಿಂದ ತೆಲುಗಿಗೆ, ಮರಾಠಿ ಭಾಷೆಗೆ ಸಿರೀಯಲ್ಗಳು ಡಬ್ ಆಗುತ್ತಿವೆ. ಹೀಗಾಗಿ, ಕನ್ನಡ ಧಾರಾವಾಹಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅದರಲ್ಲೂ ಸುಮಾರು 6 ವರ್ಷಗಳ ಕಾಲ ಪ್ರಸಾರಗೊಂಡ ಕನ್ನಡದ 'ಅಗ್ನಿಸಾಕ್ಷಿ' ಧಾರಾವಾಹಿ ಇದೀಗ ಮತ್ತೊಂದು ದಾಖಲೆ ಬರೆಯುತ್ತಿದೆ.
ಎಲ್ಲರ ಅಚ್ಚುಮೆಚ್ಚಿನ ಮೆಗಾ ಸೀರಿಯಲ್ ಆಗಿ ಹೊರ ಹೊಮ್ಮಿದ 'ಅಗ್ನಿಸಾಕ್ಷಿ' ಇದೀಗ ಮರಾಠಿ ಭಾಷೆಗೆ ರಿಮೇಕ್ ಆಗಿ ಪ್ರಸಾರಗೊಳ್ಳಲು ಸಿದ್ಧತೆ ನಡೆಸಿದೆ. ಕನ್ನಡಿಗರ ಮನೆ ಮಾತಾಗಿದ್ದ ಅಗ್ನಿ ಸಾಕ್ಷಿ ಬಹುಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿತ್ತು. ಆಕರ್ಷಕ ಕಥಾ ಹಂದರದ ಈ ಧಾರಾವಾಹಿ ಅಪಾರ ವೀಕ್ಷಕರ ಬಳಗವನ್ನು ಹೊಂದಿತ್ತು. TRPಯಲ್ಲೂ ಮೇಲುಗೈ ಸಾಧಿಸಿತ್ತು.
ನಟ ವಿಜಯ ಸೂರ್ಯ ಹಾಗೂ ನಟಿ ವೈಷ್ಣವಿ ಗೌಡ ಅವರಿಗೆ ದೊಡ್ಡ ಯಶಸ್ಸು ತಂದು ಕೊಟ್ಟ ಕೀರ್ತಿ ಅಗ್ನಿಸಾಕ್ಷಿಗೆ ಸಲ್ಲುತ್ತದೆ. ಈ ಜೋಡಿಯ ಕೆಮಿಸ್ಟ್ರಿ ಈ ಧಾರಾವಾಹಿಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಯಿತು. ಕಳೆದ ವರ್ಷ ಮುಕ್ತಾಯಗೊಂಡ ಅಗ್ನಿಸಾಕ್ಷಿ ಇದೀಗ ಮರಾಠಿ ಭಾಷೆಯಲ್ಲಿ ತೆರೆ ಕಾಣುತ್ತಿದೆ.
ಇದನ್ನೂ ಓದಿ : ಫ್ಯಾನ್ ಮೇಡ್ ವಿಡಿಯೋ ಹಂಚಿಕೊಂಡ 'ಕ್ವೀನ್': ಯಶಸ್ಸಿನ ಹಾದಿ ನೆನೆದ ಕಂಗನಾ