ಕೊರೊನಾ ಲಾಕ್ ಡೌನ್ನಿಂದ ಚಿತ್ರೀಕರಣದ ಎಲ್ಲಾ ಚಟುವಟಿಕೆಗಳು ಬಂದ್ ಆಗಿವೆ. ಲಾಕ್ ಡೌನ್ಗೂ ಮುನ್ನ ಬಿಡುಗಡೆಯಾಗಿದ್ದ ಸಿನಿಮಾಗಳು ಒಂದೆರಡು ದಿನ ಮಾತ್ರ ಪ್ರದರ್ಶನವಾದವು. ಚಿತ್ರೀಕರಣ ಅರ್ಧಕ್ಕೆ ನಿಂತವು. ಚಿತ್ರರಂಗದ ಮಂದಿ ಲಾಕ್ ಡೌನ್ ಯಾವಾಗ ಮುಗಿಯುವುದೋ ಎಂಬುದನ್ನು ಕಾಯುತ್ತಿದ್ದಾರೆ.
ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ ಹೊಸ ಚಿತ್ರ ಕೂಡಾ ಲಾಕ್ ಡೌನ್ ಮುಗಿದ ನಂತರವೇ ಸೆಟ್ಟೇರಲಿದೆ. ಇನ್ನೂ ಹೆಸರಿಡದ ವಿನೋದ್ ಪ್ರಭಾಕರ್ ಚಿತ್ರವೊಂದಕ್ಕೆ ಈಗಾಗಲೇ ಪೋಟೋಶೂಟ್ ಮಾಡಲಾಗಿದೆ. ಇವೆಲ್ಲಾ ಸಮಸ್ಯೆಗಳು ಮುಗಿದ ನಂತರ ಚಿತ್ರದ ಟೈಟಲ್ ಫಿಕ್ಸ್ ಮಾಡಿ ಚಿತ್ರತಂಡ ಶೂಟಿಂಗ್ ಆರಂಭಿಸಲು ಪ್ಲ್ಯಾನ್ ಮಾಡಿದೆ. ಎ.ಎಂ.ಎಸ್. ಪ್ರೊಡಕ್ಷನ್ಸ್ ಲಾಂಛನದ ಅಡಿಯಲ್ಲಿ ಹೇಮಾವತಿ ಮುನಿಸ್ವಾಮಿ ಅವರು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸಿದರೆ, ನಾಯಕಿಯಾಗಿ ಗಣೇಶ್ ಅಭಿನಯದ 'ಗೀತ' ಚಿತ್ರದಲ್ಲಿ ನಟಿಸಿದ್ದ ಪಾರ್ವತಿ ಅರುಣ್ ಬಣ್ಣ ಹಚ್ಚಲಿದ್ದಾರೆ. ಚಿತ್ರವನ್ನು 'ಮೂರ್ಕಲ್ ಎಸ್ಟೇಟ್' ಚಿತ್ರದ ನಿರ್ದೇಶಕ ಪ್ರಮೋದ್ ಕುಮಾರ್ ನಿರ್ದೇಶಿಸಲಿದ್ದಾರೆ. ಲವ್ ಹಾಗೂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ನೂತನ ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ ನೀಡುತ್ತಿದ್ದಾರೆ. ಸುಜ್ಞಾನ್ ಛಾಯಾಗ್ರಹಣ ಹಾಗೂ ಕೆ.ಡಿ. ವೆಂಕಟೇಶ್ ಸಾಹಸ ನಿರ್ದೇಶನ ಈ ಹೊಸ ಚಿತ್ರಕ್ಕೆ ಇರಲಿದೆ.