ಕನ್ನಡ ಚಿತ್ರರಂಗದಲ್ಲಿ ಮೂರೂವರೆ ದಶಕಗಳ ಹಿಂದೆ, ಡಾ.ವಿಷ್ಣುವರ್ಧನ್ ಅಭಿನಯದ 'ಕಥಾನಾಯಕ' ಸಿನಿಮಾ ತೆರೆಗೆ ಬಂದಿತ್ತು.ಈಗ ಇದೇ ಟೈಟಲ್ ಇಟ್ಟುಕೊಂಡು ಮತ್ತೆ ಸ್ಯಾಂಡಲ್ವುಡ್ನಲ್ಲಿ ಕಥಾನಾಯಕ ಸಿನಿಮಾ ಬರುತ್ತಿದೆ. 'ಮುಂದಿನ ನಿಲ್ದಾಣ' ಚಿತ್ರದ ಬಳಿಕ ಪ್ರವೀಣ್ ತೇಜ್ ಮತ್ತೆ ಕಥಾ ನಾಯಕನಾಗಲು ಹೊರಟ್ಟಿದ್ದಾರೆ. ಪ್ರವೀಣ್ ಜೊತೆಗೆ 'ನಮ್ ಗಣಿ ಬಿಕಾಂ ಪಾಸ್' ಖ್ಯಾತಿಯ ಅಭಿಷೇಕ್ ಶೆಟ್ಟಿ ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಯುವ ನಿರ್ದೇಶಕ ವಿನಾಯಕ ಜ್ಯೋತಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. 'ಕಥಾನಾಯಕ' ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಮುಹೂರ್ತ ಕಾರ್ಯಕ್ರಮ ಇತ್ತೀಚೆಗೆ ಮುದ್ದನಪಾಳ್ಯದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಹಾಗೂ ಅನೀಶ್ ತೇಜೇಶ್ವರ್ ಟೈಟಲ್ ಬಿಡುಗಡೆ ಮಾಡಿ ಮುಹೂರ್ತಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ವಿನಾಯಕ ಜ್ಯೋತಿ, "ನಾನು ಈ ಹಿಂದೆ ಕಾಲ್ಗೆಜ್ಜೆ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಅಲ್ಲದೆ ಒಂದಷ್ಟು ಕಿರು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ಪ್ರವೀಣ್‍ತೇಜ್ ನಾಯಕರಾಗಿ ನಟಿಸುತ್ತಿದ್ದು ಅರ್ಜುನ್ ಕಾಪಿಕಾಡ್ ಮತ್ತೊಂದು ಲೀಡ್ ರೋಲ್‍ನಲ್ಲಿದ್ದಾರೆ. ಸೆಂಟಿಮೆಂಟ್, ಆ್ಯಕ್ಷನ್ ಎಲಿಮೆಂಟ್ ಜೊತೆಗೆ ಸಸ್ಪೆನ್ಸ್, ಥ್ರಿಲ್ಲರ್ ಕಥೆಯಿರುವ ಚಿತ್ರ ಇದಾಗಿದ್ದು, ನಾಯಕಿಯನ್ನು ಹುಡುಕುವುದರಲ್ಲೇ ಚಿತ್ರದ ಕಥಾಹಂದರ ಸಾಗುತ್ತದೆ. ಪ್ರೇಕ್ಷಕರಲ್ಲಿ ಕುತೂಹಲ ಇರಲಿ ಎಂದು ನಾಯಕಿಯ ಪಾತ್ರವನ್ನು ರಹಸ್ಯವಾಗಿಟ್ಟಿದ್ದೇವೆ.ಇದೇ ತಿಂಗಳ 12 ರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು ಹಾಗೂ ದೆಹಲಿಯಲ್ಲಿ ಬಹುತೇಕ ಚಿತ್ರೀಕರಣ ಮಾಡುವ ಪ್ಲ್ಯಾನ್ ಇದೆ ಎಂದು ಹೇಳಿದರು.
ಇದನ್ನೂ ಓದಿ: 'ಮೈಲಾಪುರ' ಆಡಿಯೋ ಬಿಡುಗಡೆ ಮಾಡಿದ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ
ನಂತರ ನಾಯಕ ಪ್ರವೀಣ್ ತೇಜ್ ಮಾತನಾಡಿ, 'ಮುಂದಿನ ನಿಲ್ದಾಣ' ಚಿತ್ರದ ನಂತರ ಬಹಳ ಗ್ಯಾಪ್ ತೆಗೆದುಕೊಂಡು ಒಪ್ಪಿಕೊಂಡ ಚಿತ್ರವಿದು. ಈ ಕಥೆ ಕೇಳಿ ಬಹಳ ಇಷ್ಟವಾಯ್ತು. ಸಸ್ಪೆನ್ಸ್, ಥ್ರಿಲ್ಲರ್ ಸ್ಟೋರಿ ಇದೆ. ದೆಹಲಿಯಿಂದ ಬರುವ ಸಿಬಿಐ ಆಫೀಸರ್ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಎಂದರು. ಕಾರ್ಯಕ್ರಮದಲ್ಲಿ ಅರ್ಜುನ್ ಕಾಪಿಕಾಡ್, ನಿರ್ದೇಶಕ ವಿನಾಯಕ್, ಅಭಿಷೇಕ್ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. 'ಕಥಾನಾಯಕ' ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ. ಚಿತ್ರಕ್ಕೆ ಕಾರ್ತಿಕ್ ಛಾಯಾಗ್ರಹಣ, ನಾಗಭೂಷಣ್ ಸಹ ನಿರ್ಮಾಣ ಇದೆ.