ದಾವಣಗೆರೆ ಹುಡುಗಿ ಅದಿತಿ ಪ್ರಭುದೇವ ಕನ್ನಡಿಗರಿಗೆ ಸಾಕಷ್ಟು ಚಿರಪರಿಚಿತ ಆದರೂ ಇದುವರೆಗೂ ಅವರು ಅಭಿನಯಿಸಿರುವ ಯಾವ ಸಿನಿಮಾಗಳೂ ದೊಡ್ಡ ಮಟ್ಟಿನ ಹಿಟ್ ಕಂಡಿಲ್ಲ. ಆದರೂ ಅದಿತಿಗೆ ಮಾತ್ರ ಸಾಲು ಸಾಲು ಅವಕಾಶಗಳು ಹುಡುಕಿ ಬರುತ್ತಿವೆ. ಚಿತ್ರರಂಗದಲ್ಲಿ ಅವರಿಗೆ ಸಾಕಷ್ಟು ಬೇಡಿಕೆ ಇದ್ದು ಲಾಕ್‍ಡೌನ್ ನಂತರ ಬರೋಬ್ಬರಿ 7 ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.
ಕಳೆದ ವರ್ಷ ಲಾಕ್‍ಡೌನ್ ಮುಗಿಯುತ್ತಿದ್ದಂತೆ 'ಗಜಾನನ ಆ್ಯಂಡ್ ಗ್ಯಾಂಗ್' ಎಂಬ ಹೊಸ ಚಿತ್ರದಲ್ಲಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಮೊದಲಿಗೆ ಕೇಳಿಬಂತು. ಈ ಚಿತ್ರ ಮುಗಿಯುತ್ತಿದ್ದಂತೆಯೇ 'ಆನ' ಎಂಬ ಚಿತ್ರದಲ್ಲಿ ಅದಿತಿ ಭಾರತದ ಮೊದಲ ಲೇಡಿ ಸೂಪರ್ ಹೀರೋ ಆಗಿ ಅಭಿನಯಿಸಲಿದ್ದಾರೆ ಎಂದು ಸುದ್ದಿಯಾಯಿತು. ನಂತರ ಭಗವಾನ್ ಶ್ರೀಕೃಷ್ಣ ಪರಮಾತ್ಮ, ತ್ರಿಬಲ್ ರೈಡಿಂಗ್, 5ಡಿ ಮತ್ತು ಅಂದೊಂದಿತ್ತು ಕಾಲ ಎಂಬ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿರುವ ಸುದ್ದಿ ಬಂದಿತ್ತು. ಇದೀಗ ಪ್ರಜ್ವಲ್ ಅಭಿನಯದ ಹೊಸ ಚಿತ್ರದಲ್ಲೂ ಅವರು ನಾಯಕಿ ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿದ್ದು, ಸದ್ಯದಲ್ಲೇ ಈ ಚಿತ್ರ ಸೆಟ್ಟೇರಿಲಿದೆ. ಈ ಎಲ್ಲಾ ಸಿನಿಮಾಗಳನ್ನು ಸೇರಿಸಿದರೆ ಲಾಕ್‍ಡೌನ್ ನಂತರ ಅದಿತಿ ಏಳು ಚಿತ್ರಗಳನ್ನು ಒಪ್ಪಿಕೊಂಡಂತಾಗುತ್ತದೆ.
ಇದನ್ನೂ ಓದಿ: ಶೂಟಿಂಗ್ನಿಂದ ಬ್ರೇಕ್ ಪಡೆದು ಪತ್ನಿಯ ಕಾಳಜಿ ಮಾಡುತ್ತಿರುವ ಸೈಫ್ ಅಲಿ ಖಾನ್
ಈ ಸಿನಿಮಾಗಳಿಗೂ ಮುನ್ನವೇ ಅದಿತಿ ಓಲ್ಡ್ ಮಾಂಕ್, ತೋತಾಪುರಿ , ಒಂಬತ್ತನೇ ದಿಕ್ಕು ಮತ್ತು ಚಾಂಪಿಯನ್ ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಈ ಸಿನಿಮಾಗಳ ಪೈಕಿ 'ಒಂಬತ್ತನೇ ದಿಕ್ಕು' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. 'ತೋತಾಪುರಿ' ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಈ ಪೈಕಿ ಒಂದರ ಚಿತ್ರೀಕರಣ ಮುಗಿದಿದ್ದು, ಇದೇ ವರ್ಷ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಎರಡನೇ ಭಾಗದ ಚಿತ್ರೀಕರಣ ಈಗ ಮೈಸೂರು ಹಾಗೂ ಸುತ್ತಮುತ್ತ ನಡೆಯುತ್ತಿದ್ದು ಆ ಸಿನಿಮಾದಲ್ಲಿ ಅದಿತಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ನಂತರ ಪ್ರಜ್ವಲ್ ಮತ್ತು ವಿನಯ್ ರಾಜಕುಮಾರ್ ಅಭಿನಯದ ಸಿನಿಮಾಗಳಲ್ಲಿ ಅದಿತಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.