ಸಾಕಷ್ಟು ವಿವಾದಗಳ ನಂತರ ಜೈಲುವಾಸ ಅನುಭವಿಸಿ ಬಂದಿರುವ ನಟಿ ಸಂಜನಾ ಗಲ್ರಾನಿ ಸದ್ಯ ತಮ್ಮ ಮದುವೆಯ ಗುಟ್ಟನ್ನು ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದು, ಅಜೀಜ್ ಜೊತೆ ಮದುವೆಯಾಗಿರುವ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಅಜೀಜ್ ಜೊತೆ ಮದುವೆಯಾಗಿರುವುದು ನಿಜ. ಲಾಕ್ಡೌನ್ ಮುಗಿದ ಮೇಲೆ ಮದುವೆ ಕುರಿತು ತಿಳಿಸೋಣ ಅಂತಿದ್ದೆ. ಆದರೆ ಪರಿಸ್ಥಿತಿ ಯಾವುದಕ್ಕೂ ಸಪೋರ್ಟ್ ಮಾಡಲಿಲ್ಲ. ಮದುವೆ ಸಂಭ್ರಮದ ಬದಲಾಗಿ, ಲಾಕ್ಡೌನ್ ಸಂದರ್ಭದಲ್ಲಿ ಊಟಕ್ಕೆ ಪರದಾಡುತ್ತಿರುವ ಜನರ ಹಸಿವನ್ನ ನೀಗಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ಅಲ್ಲದೆ, ಮುಂದಿನ ದಿನಗಳಲ್ಲಿ ಸಂಜನಾ ಗಲ್ರಾನಿ ಫೌಂಡೇಶನ್ ವತಿಯಿಂದ ಇನ್ನಷ್ಟು ಕೆಲಸಗಳನ್ನ ಮಾಡಲಿದ್ದೇನೆ. ಇದರ ಜೊತೆಗೆ ನನ್ನ ಹೊಸ ವೆಬ್ಸೈಟ್ ಕೂಡ ರಿಲೀಸ್ ಆಗಿದೆ. ಎಲ್ಲವೂ ಸರಿ ಹೋಗಲಿದೆ ಎಂಬ ನಂಬಿಕೆ ಇದೆ ಎಂದು ಸಂಜನಾ ಗಲ್ರಾನಿ ಹೇಳಿದರು.
ಸಿನಿ ಕುಟುಂಬಕ್ಕೆ ದಿನಸಿ ಕಿಟ್ ವಿತರಿಸಿದ ಸಂಜನಾ
ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಸಿನಿ ಕುಟುಂಬಕ್ಕೆ ಸಹಾಯ ಹಸ್ತ ಚಾಚಿರುವ ನಟಿ ಸಂಜನಾ ಗಲ್ರಾನಿ, ಕಲಾವಿದರು ಮತ್ತು ತಂತ್ರಜ್ಞರಿಗೆ ದಿನಸಿ ಕಿಟ್ ವಿತರಣೆ ಮಾಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿ ಪಕ್ಕದಲ್ಲಿರುವ ಗುರುರಾಜ ಮಂಟಪದಲ್ಲಿ ಸಂಜನಾ, ಚಿತ್ರರಂಗದ ಕಾರ್ಮಿಕರಿಗೆ ಕಿಟ್ಗಳನ್ನ ವಿತರಣೆ ಮಾಡಿದರು. ಸಂಜನಾಗೆ ನಿರ್ಮಾಪಕ ಕೆ.ಮಂಜು, ಎನ್.ಕುಮಾರ್ ಹಾಗೂ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಸಾಥ್ ನೀಡಿದರು.