ಜಗತ್ತನ್ನೇ ಬೆಚ್ಚಿಬೀಳಿಸಿರುವ ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ವಿಶ್ವವೇ ಟೊಂಕ ಕಟ್ಟಿ ನಿಂತಿದೆ. ಇದಕ್ಕೆ ಅನೇಕ ಸೆಲೆಬ್ರಿಟಿಗಳು ಸಹ ಕೈ ಜೋಡಿಸಿದ್ದಾರೆ.
ಕೋವಿಡ್-19 ಹರಡುವಿಕೆ ತಡೆಗಟ್ಟಲು ಪ್ರಧಾನಿ ಮೋದಿ ದೇಶಾದ್ಯಂತ ಲಾಕ್ಡೌನ್ ಘೋಷಿಸಿದ್ದಾರೆ. ಇದರಿಂದಾಗಿ ಬೀದಿ ಬದಿ ವ್ಯಾಪಾರ ಸೇರಿದಂತೆ ಜನರ ಓಡಾಟಕ್ಕೆ ಕೂಡ ಬ್ರೇಕ್ ಬಿದ್ದಿದೆ. ಇದರಿಂದ ಅನೇಕ ಬೀದಿನಾಯಿಗಳು ಹಸಿವಿನಿಂದ ಬಳಲುವಂತಾಗಿವೆ.
ಸ್ಟೀಲ್ ಫ್ಲೈ ಓವರ್ ಬೇಡ, ಸೇವ್ ಕಬ್ಬನ್ ಪಾರ್ಕ್, ಪ್ರಾಣಿಗಳ ಕುರಿತ ಹೋರಾಟ ಸೇರಿದಂತೆ ಹಲವು ಸಾಮಾಜಿಕ ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಚಂದನವನದ ಬೆಡಗಿ ಸಂಯುಕ್ತಾ ಹೊರನಾಡು ಬೀದಿನಾಯಿಗಳ ಹಸಿವಿನ ಚೀಲ ತುಂಬಿಸುವ ಕಾರ್ಯಕ್ಕಿಳಿದಿದ್ದಾರೆ.
ಬೀದಿನಾಯಿಗಳಿಗೆ ಊಟ ಹಾಕುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇತರರಿಗೂ ಇವರ ಕಾರ್ಯ ಸ್ಫೂರ್ತಿದಾಯಕವಾಗಿದೆ.
ಸಂಯುಕ್ತಾ ಹೊರಾನಾಡು ಭಾರ್ಗವಿ ನಾರಾಯಣ್ ಕುಟುಂಬದವರು. ಇವರ ತಾಯಿ ಸುಧಾ ಬೆಳವಾಡಿ ಮತ್ತು ಚಿಕ್ಕಪ್ಪ ಪ್ರಕಾಶ್ ಬೆಳವಾಡಿ ಸಹ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದವರು.