ಬೆಂಗಳೂರು : ಸ್ಯಾಂಡಲ್‌ವುಡ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಸಿಸಿಬಿಯಿಂದ ಬಂಧನಕ್ಕೊಳಗಾಗಿರುವ ನಟಿ ರಾಗಿಣಿ ದ್ವಿವೇದಿ ರಾಜ್ಯ ಆರೋಗ್ಯ ಇಲಾಖೆಯ ರಾಯಭಾರಿ ಆಗೋದಕ್ಕೆ ಮುಂದಾಗಿದ್ದರಂತೆ. ಮತ್ತಲ್ಲಿದ್ದುಕೊಂಡು ಮಾನಸಿಕ ಸ್ಥಿಮಿತ ಕಳೆದಕೊಳ್ತಾರೆ ಅನ್ನೋ ಆರೋಪಕ್ಕೆ ಸಿಲುಕಿರುವ ನಟಿ, ಮಾನಸಿಕ ಅಸ್ವಸ್ಥರಿಗೆ ಕೌನ್ಸೆಲಿಂಗ್ ಮಾಡಲು ಮುಂದಾಗಿದ್ರಂತೆ. ಆರೋಗ್ಯ ಇಲಾಖೆಯಲ್ಲಿ ರಾಯಭಾರಿಯಾಗಲು ತುಪ್ಪದ ಬೆಡಗಿ ಪ್ರಯತ್ನಿಸಿದ್ರಂತೆ.
ಸಿಎಂ ಯಡಿಯೂರಪ್ಪರನ್ನೇ ಒಪ್ಪಿಸಿ ರಾಯಭಾರಿಯಾಗಲು ಯತ್ನ!: ಸಚಿವ ಶ್ರೀರಾಮುಲುರನ್ನು ಈ ವಿಚಾರವಾಗಿ ಜೂನ್ 25ರಂದು ರಾಗಿಣಿ ಭೇಟಿ ಮಾಡಿದ್ದಾರೆ. ಮಾನಸಿಕ ಒತ್ತಡ, ಮಾನಸಿಕ ಅಸ್ವಸ್ಥತೆ ಹೋಗಲಾಡಿಸಲು ರಾಯಭಾರಿ ಆಗುತ್ತೇನೆ ಎಂದಿದ್ದರಂತೆ. ಆದರೆ, ಸಚಿವ ಶ್ರೀರಾಮುಲು ಹಾಗೂ ಖ್ಯಾತ ವೈದ್ಯರೊಬ್ಬರು ಈ ವಿಷಯವನ್ನು ತಡೆಹಿಡಿದಿದ್ದರಂತೆ. ರಾಗಿಣಿಯ ಹಿನ್ನೆಲೆ ಅರಿತೇ ಅದನ್ನು ತಡೆಹಿಡಿಯಲಾಗಿತ್ತು ಎನ್ನಲಾಗ್ತಿದೆ.
ಭೇಟಿಯ ನಂತರ ಸಚಿವರು ತಜ್ಞ ವೈದ್ಯರ ಜೊತೆ ಮಾತುಕತೆ ನಡೆಸಿ ತಿಳಿಸುತ್ತೇವೆ ಅಂತಾ ವಾಪಸ್ ಕಳುಹಿಸಿದ್ದರು. ಆ ನಡುವೆ ಮತ್ತೊಮ್ಮೆ ಪ್ರಯತ್ನಿಸಿದ್ದ ರಾಗಿಣಿಗೆ, ಅಂತಿಮವಾಗಿ ರಾಯಭಾರತ್ವ ನೀಡೋಕೆ ಆರೋಗ್ಯ ಇಲಾಖೆ ಮೀನಾಮೇಷ ಎಣಿಸಿತ್ತು. ಸದ್ಯ ನಾವು ಅವರಿಗೆ ರಾಯಭಾರತ್ವ ನೀಡಿಲ್ಲ ಅನ್ನೋದೇ ಸಮಾಧಾನಕರ ವಿಷಯ ಅಂತಾರೆ ಹೆಸರು ಹೇಳಲು ಇಚ್ಚಿಸದ ಆರೋಗ್ಯಾಧಿಕಾರಿಗಳು.
ಕೊರೊನಾ ಸಂಕಷ್ಟ ಕಾಲದಲ್ಲಿ ಒಂದಿಷ್ಟು ಕಡೆ ಉಚಿತ ಆಹಾರ ವಿತರಣೆಯಂತಹ ಕೆಲಸಗಳನ್ನೂ ಮಾಡಿದ್ದ ನಟಿಮಣಿ, ಈಗ ಡ್ರಗ್ಸ್ ಜಾಲದಲ್ಲಿ ಸಿಲುಕಿಕೊಂಡಿರೋದ್ರಿಂದ, ಸಾಮಾಜಿಕ ಕಾರ್ಯ ಮಾಡ್ತೀನಿ ಅನ್ನೋದೆಲ್ಲ ಬರೀ ನಾಟಕವಾ ಅನ್ನೋ ಪ್ರಶ್ನೆಯೂ ಜನರಲ್ಲಿ ಮೂಡಿದೆ.