ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ಇತ್ತೀಚೆಗೆ ಪೌರ ಕಾರ್ಮಿಕರನ್ನು ಮನೆಗೆ ಕರೆಸಿ ಟೀ ನೀಡಿ ಅವರ ಕಷ್ಟಸುಖಗಳನ್ನು ವಿಚಾರಿಸಿದ್ದರು. ಅಲ್ಲದೆ, ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ತಾವೇ ಅಡುಗೆ ಮಾಡಿ, ಊಟ ಪೂರೈಸಿ ಗಮನ ಸೆಳೆದಿದ್ದರು. ಇದೀಗ ಮೇವು ಪೂರೈಸುವ ಮೂಲಕ ಕಟುಕರ ಪಾಲಾಗುತ್ತಿದ್ದ ಹಸುಗಳನ್ನು ರಕ್ಷಿಸಿದ್ದಾರೆ.
ಕೊರೊನಾ ವೈರಸ್ ಹಾವಳಿಯಿಂದ ಮನುಷ್ಯರಷ್ಟೇ ಅಲ್ಲ ಪ್ರಾಣಿ, ಪಕ್ಷಿಗಳು ಹಸಿವಿನಿಂದ ನರಳುವಂತಾಗಿದೆ. ಕೊರೊನಾ ಭೀತಿಗೆ ಇಡೀ ದೇಶ ಲಾಕ್ಡೌನ್ ಆಗಿರುವುದರಿಂದ ಕೆಲವರು ಅಗತ್ಯ ವಸ್ತುಗಳನ್ನು ದುಪ್ಪಟ್ಟು ಬೆಲೆಗೆ ಮಾರುತ್ತಿದ್ದಾರೆ. ಅದೇ ರೀತಿ ಪಶುಗಳ ಮೇವಿನ ಬೆಲೆ ಕೂಡಾ ಏರಿಕೆಯಾಗಿದೆ. ಇದು ಬೆಂಗಳೂರಿನ ಕೆಲವು ಗೋಶಾಲೆಗಳಿಗೆ ನುಂಗಲಾರದ ತುತ್ತಾಗಿದೆ. ಫ್ರೇಜರ್ ಟೌನ್ನಲ್ಲಿ ಸುಮಾರು 100 ವರ್ಷಗಳಿಂದ ಇರುವ ಗೋಶಾಲೆಯಲ್ಲಿ ಲಾಕ್ಡೌನ್ ಕಾರಣದಿಂದ ಹಸುಗಳಿಗೆ ಸರಿಯಾದ ಮೇವು ಸಿಗುತ್ತಿಲ್ಲ. ಫೀಡ್ಸ್ ನೀಡಲು ಅದರ ಬೆಲೆ ಕೂಡಾ ಹೆಚ್ಚಾಗಿದ್ದು ಹಸುಗಳು ಉಪವಾಸ ಇರುವಂತಾಗಿದೆ. ಈ ಕಾರಣದಿಂದ ಗೋಶಾಲೆಯವರು ಹಸುಗಳನ್ನು ಕಟುಕರಿಗೆ ಮಾರಲು ಮುಂದಾಗಿದ್ದರು.
ಆದರೆ ಇದನ್ನು ಅರಿತ ನಟಿ ರಾಗಿಣಿ ದ್ವಿವೇದಿ, ಹಸುಗಳ ಹಸಿವು ನೀಗಿಸುವುದು ಮಾತ್ರವಲ್ಲದೆ, ಅವು ಕಟುಕರ ಪಾಲಾಗುವುದನ್ನು ತಪ್ಪಿಸಿದ್ದಾರೆ. ಹಸುಗಳಿಗೆ ಮೇವು ಪೂರೈಸಿ ಮತ್ತಷ್ಟು ಮೇವು ತರಿಸುವ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ ಹಸುಗಳ ಮೇವಿನ ಬೆಲೆಯನ್ನು ಮನಬಂದಂತೆ ಹೆಚ್ಚಿಸಿರುವ ವರ್ತಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.