ನಟಿ ರಾಗಿಣಿ, ಲಾಕ್ಡೌನ್ ಸಮಯದಲ್ಲಿ ಮನೆಯಲ್ಲಿ ಸುಮ್ಮನೆ ಕೂರದೆ ಸಾಮಾಜಿಕ ಸೇವೆ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಇದೀಗ ಅವರು ಉತ್ತರ ಕರ್ನಾಟಕ ಮೂಲದ ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ಮನೆ ಹಾಗೂ ಶೌಚಾಲಯ ನಿರ್ಮಿಸಿಕೊಡುವ ಮೂಲಕ ಮತ್ತೆ ಎಲ್ಲರೂ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ಧಾರೆ.
ಬೆಂಗಳೂರಿನ ಲಿಂಗರಾಜಪುರದ ಕಮ್ಮನಹಳ್ಳಿ ಕೆರೆ ಬಳಿ ಇರುವ ಸ್ಲಂನಲ್ಲಿ ಸುಮಾರು 150 ಕ್ಕೂ ಹೆಚ್ಚು ಉತ್ತರ ಕರ್ನಾಟಕದ ವಲಸೆ ಕಾರ್ಮಿಕರು ವಾಸವಿದ್ದಾರೆ. ಕೊರೊನಾ ಲಾಕ್ ಡೌನ್ ವೇಳೆ ನಗರದಲ್ಲಿ ಕೆಲಸ ಇಲ್ಲದ ಕಾರಣ ಈ ಕಾರ್ಮಿಕರೆಲ್ಲಾ ಊರಿಗೆ ತೆರಳಿದ್ದರು. ಈ ವೇಳೆ ಕೆಲವು ದುಷ್ಕರ್ಮಿಗಳು ಬಡಜನರು ವಾಸಿಸುತ್ತಿದ್ದ ಗುಡಿಸಲಿಗೆ ಬೆಂಕಿ ಹಚ್ಚಿ ನಿರ್ನಾಮ ಮಾಡಿದ್ದರು. ಲಾಕ್ ಡೌನ್ ಸಡಿಲಿಕೆ ಆದ ಬೆನ್ನಲ್ಲೇ ಮತ್ತೆ ಬೆಂಗಳೂರಿಗೆ ಬಂದ ಕಾರ್ಮಿಕರು ತಾವು ವಾಸಿಸುತ್ತಿದ್ದ ಮನೆಗಳು ಧ್ವಂಸವಾಗಿರುವುದನ್ನು ನೋಡಿ ದು:ಖಪಟ್ಟಿದ್ದರು.
ತಮ್ಮ ಗುಡಿಸಲು ಇದ್ದ ಜಾಗದಲ್ಲೇ ಜನರು ಟಾರ್ಪಾಲ್ ಕಟ್ಟಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಕಳೆದ ವಾರ ಸುರಿದ ಮಳೆಯಿಂದ ಈ ತಾತ್ಕಾಲಿಕ ಟೆಂಟ್ ಕೂಡಾ ನಾಶವಾಗುವ ಪರಿಸ್ಥಿತಿ ಉಂಟಾಗಿದ್ದು ಇಲ್ಲಿ ವಾಸವಿರುವ ಜನರ ಪರಿಸ್ಥಿತಿ ಬಹಳ ಶೋಚನೀಯವಾಗಿದೆ. ಇದನ್ನು ಅರಿತ ನಟಿ ರಾಗಿಣಿ ತಮ್ಮ ಆರ್ಡಿ ವೆಲ್ಫೇರ್ ಸಂಸ್ಥೆ ಮೂಲಕ ವಲಸೆ ಕಾರ್ಮಿಕರಿಗೆ ಮಳೆಯಿಂದ ರಕ್ಷಿಸಿಕೊಳ್ಳುವ ಸಲುವಾಗಿ ತಾತ್ಕಾಲಿಕವಾಗಿ ಮನೆಗಳು ಹಾಗೂ ಶೌಚಾಲಯಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ವಲಸೆ ಕಾರ್ಮಿಕರಿಗೆ ಈ ಪ್ರದೇಶದಲ್ಲಿ ವಾಸ ಮಾಡಲು ಹಕ್ಕುಪತ್ರ ಕೂಡಾ ದೊರೆತಿದ್ದು ಮುಂದಿನ ದಿನಗಳಲ್ಲಿ ಸ್ವಂತ ಸೂರು ನಿರ್ಮಿಸಿಕೊಳ್ಳಲು ಕೂಡಾ ಸಹಾಯ ಮಾಡುವುದಾಗಿ ಕೂಡಾ ರಾಗಿಣಿ ಭರವಸೆ ನೀಡಿದ್ದಾರೆ.