ಟಿ.ಎನ್ ಸೀತಾರಾಮ್ ನಿರ್ದೇಶನದ ಮಗಳು ಜಾನಕಿ ಧಾರಾವಾಹಿಯಲ್ಲಿ ನಾಯಕಿ ಜಾನಕಿ ಆಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಗಾನವಿ ಲಕ್ಷ್ಮಣ್ ಹಿರಿತೆರೆಯಲ್ಲಿ ಅಭಿನಯಿಸುತ್ತಿರುವ ವಿಚಾರ ವೀಕ್ಷಕರಿಗೆ ತಿಳಿದೇ ಇದೆ. ರಿಷಬ್ ಶೆಟ್ಟಿ ಅಭಿನಯದ ಹೀರೋ ಸಿನಿಮಾದಲ್ಲಿ ನಾಯಕಿಯಾಗಿ ಗಾನವಿ ನಟಿಸಿದ್ದು ಇಂದು ಸಿನಿಮಾ ಬಿಡುಗಡೆಯಾಗಲಿದೆ.
ಅಂದ ಹಾಗೇ ಹೀರೋ ಸಿನಿಮಾದಲ್ಲಿ ಹಲವು ಶೇಡ್‌ಗಳಿರುವ ಪಾತ್ರದಲ್ಲಿ ಗಾನವಿ ನಟಿಸಿದ್ದಾರೆ. 'ಮೊದಲ ಸಿನಿಮಾದಲ್ಲಿಯೇ ನನಗೆ ವಿಭಿನ್ನ ಪಾತ್ರ ದೊರಕಿದೆ. ಒಂದೇ ಸಿನಿಮಾದಲ್ಲಿ ಬೇರೆ ಬೇರೆ ತರಹದ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಜೀವನದಲ್ಲಿ ಪರಿಸ್ಥಿತಿಗೆ ತಕ್ಕಂತೆ ಬದಲಾಗುತ್ತಾ ಹೋಗಬೇಕಾದುದು ಅನಿವಾರ್ಯ. ಆ ಸಮಯದಲ್ಲಿ ತಮ್ಮ ಸ್ವಭಾವವನ್ನು ಬದಲಾಯಿಸಿಕೊಂಡು ಹೊಂದಿಕೊಂಡು ಹೋಗಬೇಕಾಗುತ್ತದೆ. ಅದೇ ರೀತಿ ಈ ಚಿತ್ರದಲ್ಲಿ ನಾಯಕಿ ಕೂಡಾ. ಪಾತ್ರದಲ್ಲಿ ನಟಿಸಿರುವುದು ಖುಷಿ ತಂದಿದೆ. ಅಂತಹ ಒಟ್ಟಿನಲ್ಲಿ ನಟನೆಗೆ ಅವಕಾಶ ಇರುವ ಪಾತ್ರ ಸಿಕ್ಕಿದ್ದು ಸಂತಸ ನೀಡಿದೆ" ಎನ್ನುತ್ತಾರೆ ಗಾನವಿ.
"ಭಾವಚಿತ್ರ ಸಿನಿಮಾದ ಮೂಲಕ ನಾನು ಹಿರಿತೆರೆಗೆ ಕಾಲಿಟ್ಟಿದ್ದು, ಅದು ಇನ್ನು ರಿಲೀಸ್ ಆಗಬೇಕಿದೆ. ಇದೀಗ ಹೀರೋ ಸಿನಿಮಾದಲ್ಲಿ ನಟಿಸಿದ್ದು ಬಿಡುಗಡೆಯಾಗಿದೆ. ಹೀರೋ ಸಿನಿಮಾ ಮೊದಲು ಬಿಡುಗಡೆಯಾದ ಕಾರಣ ಇದನ್ನು ನನ್ನ ಮೊದಲ ಸಿನಿಮಾ ಎಂದು ಹೇಳಬಹುದು. ರಿಷಬ್ ಶೆಟ್ಟಿ ಜತೆ ತೆರೆ ಹಂಚಿಕೊಂಡಿದ್ದು ತುಂಬಾ ಸಂತಸ ನೀಡಿದೆ" ಎಂದು ಹೇಳುತ್ತಾರೆ.
ಮಗಳು ಜಾನಕಿಯಾಗಿ ಕಿರುತೆರೆ ವೀಕ್ಷಕರ ಮನ ಸೆಳೆದ ಗಾನವಿ ಹಿರಿತೆರೆಯಲ್ಲಿ ಮಿಂಚುತ್ತಾರಾ ಕಾದು ನೋಡಬೇಕಾಗಿದೆ.