ಹಿರಿಯ ನಟಿ ಬಿ ಜಯಾ ಮೃತ ದೇಹವನ್ನು ಅನಾಥವಾಗಿ ಬಿಟ್ಟಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ವಿಡಿಯೋ ಕುರಿತು ನಟಿಯ ಸಂಬಂಧಿಕರು ಪ್ರತಿಕ್ರಿಯಿಸಿದ್ದು, ಹಾಗೆಲ್ಲಾ ಏನೂ ನಡೆದಿಲ್ಲ. ಜಯಾ ಕುಟುಂಬದ 10 ಸದಸ್ಯರ ಸಮ್ಮುಖದಲ್ಲಿ ನಮ್ಮ ಸಂಪ್ರದಾಯಂತೆ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಿರಿಯ ನಟಿ ಬಿ ಜಯಾ ಮೃತ ದೇಹವನ್ನು ಕಸದ ಪಕ್ಕದಲ್ಲೇ ಇಟ್ಟು, ಸಂಬಂಧಿಕರು ಅನಾಥವಾಗಿ ಬಿಟ್ಟಿದ್ದರಿಂದ ಸ್ಥಳೀಯರೇ ಅಂತ್ಯ ಸಂಸ್ಕಾರ ಮಾಡಿದ್ದಾರೆ ಎಂಬ ಆರೋಪದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆ್ಯಂಬುಲೆನ್ಸ್ ಡ್ರೈವರೊಬ್ಬರು ಬಿ ಜಯಾ ಅವರ ಮೃತದೇಹವನ್ನ ಚಾಮರಾಜನಗರದ ಟಿಆರ್‌ಮಿಲ್ ಬಳಿಯಿರುವ ಚಿತಾಗಾರಕ್ಕೆ ತೆಗೆದುಕೊಂಡು ಬಂದು ಸರಿ ಸುಮಾರು 1 ಗಂಟೆ ಕಾದರೂ ಕುಟುಂಬದ ಯಾವ ಸದಸ್ಯರೂ ಅಲ್ಲಿಗೆ ಬಂದಿರಲಿಲ್ಲ. ಕಾದೂ ಕಾದೂ ಸುಸ್ತಾಗಿದ್ದ ಡ್ರೈವರ್ ಮೃತದೇಹವನ್ನು ಅಲ್ಲಿಯ ಇಳಿಸಿ ಹೋಗಿದ್ದಾನೆ ಎನ್ನಲಾಗಿತ್ತು.
ನೂರಾರು ಚಿತ್ರಗಳಲ್ಲಿ ತಾಯಿ ಪಾತ್ರ ಮಾಡಿದವರ ಶೋಚನೀಯ ಕಥೆ ಇದು. ಜಯಾ ಮಾಡಿದ ತಪ್ಪಾದ್ರೂ ಏನು ಅನ್ನೋ ಪ್ರಶ್ನೆಯನ್ನು ಜನ ಸೋಷಿಯಲ್ ಮೀಡಿಯಾದಲ್ಲಿ ಕೇಳಿದ್ದರು. ಈ ವಿಚಾರ ಎಲ್ಲೆಡೆ ಗೊತ್ತಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಬಿ.ಜಯಾ ಅವರ ಸಂಬಂಧಿಕರು, ಯಾರೋ ಕಿಡಿಗೇಡಿಗಳು ಪ್ರಚಾರಕ್ಕಾಗಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.