ನಿರ್ದೇಶಕ ಯೋಗರಾಜ್ ಭಟ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ 'ಪದವಿ ಪೂರ್ವ' ಚಿತ್ರಕ್ಕೆ ಅಂಜಲಿ ಹರೀಶ್ ಎಂಬ ಚೆಂದುಳ್ಳಿ ಚೆಲುವೆ ಆಯ್ಕೆಯಾಗಿದ್ದಾಳೆ. ಹರಿಪ್ರಸಾದ್ ಜಯಣ್ಣ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಯುವ ನಟ ಪೃಥ್ವಿ ಶಾಮನೂರ್ ನಾಯಕ, ನಟನಾಗಿ ಕಾಣಿಸುತ್ತಿದ್ದು, ಅಂಜಲಿ ಹರೀಶ್ ನಾಯಕಿಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ.
2019ರಲ್ಲಿ ಟೈಮ್ಸ್ ಫ್ರೆಶ್ ಫೇಸ್ ಆಗಿ ಫ್ಯಾಷನ್ ಶೋನಲ್ಲಿ ಮಿಂಚಿದ್ದ ಅಂಜಲಿ, 'ಪದವಿ ಪೂರ್ವ' ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ.
ಮಾಡೆಲ್ ಕಂ ಕಾನೂನು ವಿದ್ಯಾರ್ಥಿನಿಯಾಗಿರುವ ಅಂಜಲಿ ಹರೀಶ್, ಬಾಲಿವುಡ್ನ ಹಿರಿಯ ನಟ ಅನುಪಮ್ ಖೇರ್ ಅವರ ಅಭಿನಯ ಶಾಲೆಯಲ್ಲಿ ತರಬೇತಿ ಪಡೆದಿದ್ದಾರೆ. ಬಾಲಿವುಡ್ ಹಾಗೂ ಸ್ಯಾಂಡಲ್ವುಡ್ ಸೇರಿ ಮೂರು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಸಹ ಮಾಡಿದ ಅವರಿಗೆ ನಟಿಯಾಗಿ 'ಪದವಿ ಪೂರ್ವ' ಚಿತ್ರ ಮೊದಲ ಸಿನಿಮಾವಾಗಿದೆ.
ಟೈಟಲ್ ಹೇಳುವ ಹಾಗೆ ಈ ಚಿತ್ರ ವಿಶ್ವವಿದ್ಯಾಲಯ, ಪದವಿ ಪೂರ್ವ ವಿದ್ಯಾರ್ಥಿಗಳ ಸುತ್ತ ಸುತ್ತುವ ಕಥೆಯಾಗಿದೆ. ಚಿತ್ರದ ನಾಯಕ ಪೃಥ್ವಿ ಶಾಮನೂರ್ಗೂ ಕೂಡ ಇದು ಚೊಚ್ಚಲ ಸಿನಿಮಾ ಆಗಿದೆ. ಪೃಥ್ವಿ ಜೊತೆಯಾಗಿ ಅಂಜಲಿ ಕಾಣಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಸಂತೋಷ್ ರೈ ಪತಾಜೆ ಕ್ಯಾಮೆರಾ ವರ್ಕ್ ಇರಲಿದೆ.
ಸದ್ಯ ಚಿತ್ರದ ನಾಯಕ ಹಾಗೂ ನಾಯಕಿ ಫೈನಲ್ ಆಗಿದ್ದು ನಿರ್ದೇಶಕ ಹರಿಪ್ರಸಾದ್ ಜಯಣ್ಣ ಮಲೆನಾಡಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲು ತಯಾರಿ ನಡೆಸಿದ್ದಾರೆ. ಇನ್ನುಳಿದ ಪಾತ್ರ ವರ್ಗದ ಬಗ್ಗೆ ಚಿತ್ರತಂಡ ಸದ್ಯದಲ್ಲೇ ತಿಳಿಸಲಿದೆ. ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಜಂಟಿಯಾಗಿ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.