ಗಣೇಶ ಹಬ್ಬಕ್ಕೆ ಇನ್ನು ಎರಡೇ ದಿನಗಳು ಬಾಕಿ ಇವೆ. ಭಕ್ತರು ಮಾರುಕಟ್ಟೆಗೆ ತೆರಳಿ ಹೂವು, ಹಣ್ಣು ಸೇರಿದಂತೆ ಹಬ್ಬದ ಸಾಮಗ್ರಿಗಳನ್ನು ಕೊಂಡುಕೊಳ್ಳುವಲ್ಲಿ ಬ್ಯುಸಿ ಆಗಿದ್ದಾರೆ. ವಾರದ ಮೊದಲಿನಿಂದಲೇ ಗಣೇಶ ಮೂರ್ತಿಗೆ ಮುಂಗಡ ಬುಕಿಂಗ್ ಕೂಡಾ ಆರಂಭವಾಗಿದೆ.
ಇನ್ನು ಪರಿಸರಕ್ಕೆ ಹಾನಿಕರವಾದ ಪಿಒಪಿ ಗಣೇಶನ ಬದಲು ಮಣ್ಣಿನ ವಿಘ್ನೇಶ್ವರನನ್ನು ಪೂಜಿಸಿ ಎಂದು ಪ್ರತಿ ವರ್ಷ ಅರಿವು ಮೂಡಿಸುವ ಕಾರ್ಯಕ್ರಮಗಳು ಜರುಗುತ್ತಲೇ ಇವೆ. ಪಿಒಪಿ ಮೂರ್ತಿಗಳನ್ನು ಬಳಸದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿ ಕೂಡಾ ಖಡಕ್ ಸಂದೇಶ ನೀಡಿದೆ. ಎಂದಿನಂತೆ ಈ ಬಾರಿ ಕೂಡಾ ಇದಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಸಿನಿಮಾ ನಟ ನಟಿಯರ ಮೂಲಕ ಸರ್ಕಾರ ನಡೆಸುತ್ತಿದೆ.
ಮೊನ್ನೆಯಷ್ಟೇ ಕಿಚ್ಚ ಸುದೀಪ್ ಪಿಒಪಿ ಮೂರ್ತಿಗಳ ಬಳಕೆ ಬೇಡ ಎಂದು ಮನವಿ ಮಾಡಿದ್ದರು. 'ಈಗ ಪಿಒಪಿ ಹಾಗೂ ರಾಸಾಯನಿಕ ಬಣ್ಣ ಬಳಸಿದ ಗಣೇಶ ಮೂರ್ತಿಗಳ ಬಳಕೆ ಬೇಡ ಮಣ್ಣಿನಿಂದಲೇ ಮಾಡಿದ ಪರಿಸರ ಸ್ನೇಹಿ ಗಣಪನ ಮೂರ್ತಿಗಳನ್ನು ಬಳಸಿ ಎಂದು ನಟ ಯಶ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಜೊತೆಗೆ ರಾಜ್ಯದ ಜನತೆಗೆ ಗೌರಿ- ಗಣೇಶ ಹಬ್ಬದ ಶುಭಾಶಯ ಕೂಡಾ ಕೋರಿದ್ದಾರೆ.