ಸಾಮಾನ್ಯ ಪಾತ್ರಗಳಲ್ಲಿಯೂ ಅದ್ಭುತ ಅಭಿನಯ ತೋರಿ ಸೈ ಎನಿಸಿಕೊಂಡಿರುವ ವೈಜನಾಥ್ ಬಿರಾದಾರ್ ಅವರೀಗ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿರುವ ಅವರು, ಹೊಸದೊಂದು ಕಲಾತ್ಮಕ ಪಾತ್ರದ ಮೂಲಕ ರಾಷ್ಟ್ರ ಪ್ರಶಸ್ತಿಯ ತವಕದಲ್ಲಿದ್ದಾರೆ.
ಸದ್ಯ 'ತಮಟೆ ನರಸಿಂಹ' ಎಂಬ ಕಲಾತ್ಮಕ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಯಾಗಿ ಬಿರಾದಾರ್ ಕಾಣಿಸಿಕೊಳ್ಳುತ್ತಿದ್ದಾರೆ. ತಮಟೆ ನರಸಿಂಹನಾಗಿ ಬಿರಾದಾರ್ ಬಣ್ಣ ಹಚ್ಚಿದ್ದು, ಈ ಚಿತ್ರಕ್ಕೆ ಎನ್.ಟಿ.ಜಯರಾಮರೆಡ್ಡಿ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಜಯರಾಮರೆಡ್ಡಿ ಅವರ 'ಮನೆಯೇ ಮೊದಲ ಪಾಠ ಶಾಲೆ' ಎಂಬ ಮಕ್ಕಳ ಚಿತ್ರ ಅತ್ಯುತ್ತಮ ಮಕ್ಕಳ ಚಿತ್ರ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿದೆ.
ಈ ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ಗಳಿಸುವ ಹುಮ್ಮಸ್ಸಿನೊಂದಿಗೆ ಜಯರಾಮ್ ರೆಡ್ಡಿ ನಿರ್ದೇಶನ ಮಾಡುತ್ತಿದ್ದು, ಚಿತ್ರೀಕರಣ ಯಶಸ್ವಿಯಾಗಿ ನಡೆಯುತ್ತಿದೆ. ಒಂದೇ ಶೆಡ್ಯೂಲ್ನಲ್ಲಿ ಈ ಚಿತ್ರವನ್ನು ಪೂರ್ಣಗೊಳಿಸಲು ನಿರ್ದೇಶಕರು ಪ್ಲಾನ್ ಮಾಡಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಊರಿನ ಯಜಮಾನನಾಗಿ ಹಿರಿಯ ನಟ ದತ್ತಣ್ಣ ಅಭಿನಯಿಸುತ್ತಿದ್ದಾರೆ.
ಕನ್ನಡದ ಸುಮಾರು 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಬಿರಾದಾರ್ ಅವರ ಸಾಧನೆಗೆ ಕನ್ನಡಿ ಎಂಬಂತೆ 2010ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಕನಸೆಂಬ ಕುದುರೆಯನೇರಿ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ದಕ್ಕಿತ್ತು. ಈ ಚಿತ್ರ ಸ್ಪೇನ್ ಹಾಗೂ ಮ್ಯಾಡ್ರಿಡ್ ಫಿಲಂ ಫೆಸ್ಟಿವಲ್ನಲ್ಲಿ ಪ್ರದರ್ಶನಗೊಂಡಿದ್ದಲ್ಲದೆ, 2011ರಲ್ಲಿ ಬಿರಾದಾರ್ ಅವರು ಫಿಲಂ ಫೇರ್ ಪ್ರಶಸ್ತಿಗೂ ಭಾಜನರಾದರು.