ಭಾರತೀಯ ಸಿನಿಮಾ ರಂಗದಲ್ಲಿ, ತನ್ನ ಟ್ಯಾಲೆಂಟ್ನಿಂದಲೇ ಕನ್ನಡದ ಕೀರ್ತಿಯನ್ನ ಎತ್ತಿ ಹಿಡಿಯುತ್ತಿರುವ ನಟ ಕಿಚ್ಚ ಸುದೀಪ್. ಸಿನಿಮಾ ಜೊತೆ ಜೊತೆಗೆ ಸಮಾಜಮುಖಿ ಕೆಲಸಗಳನ್ನ ಮಾಡ್ತಾ ಇರೋ ಸುದೀಪ್, ಅಭಿಮಾನಿಗಳು ಹಾಗು ಸಾವಿರಾರು ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಇದೀಗ ಅವರ 'ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ'ಯಿಂದ ಮತ್ತೊಂದು ಸಾರ್ಥಕ ಕೆಲಸವಾಗಿದೆ. ಎರಡೂವರೆ ವರ್ಷದ ಬಾಲಕನ ಬಾಳಿಗೆ ಕಿಚ್ಚ ಸುದೀಪ್ ಬೆಳಕು ನೀಡಿದ್ದಾರೆ.
ಶಿವಮೊಗ್ಗದ ಯಡವಾಲ ಗ್ರಾಮದ ನವೀನ್ ನಾಯಕ್ ಎಂಬವರ ಪುತ್ರ ಧನುಷ್ ನಾಯಕ್ಗೆ ಒಂಬತ್ತು ತಿಂಗಳ ಹಿಂದೆ ಚಿಕನ್ ಪಾಕ್ಸ್ ಆಗಿತ್ತು. ಮಗುವಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ಚಿಕನ್ ಪಾಕ್ಸ್ ನಿಂದ ಕಣ್ಣಿಗೆ ಹಾನಿ ಉಂಟಾಗಿತ್ತು. ಅಲ್ಲದೇ ಎಂಟು ತಿಂಗಳ ಹಿಂದೆ ಕಣ್ಣಿನಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದ್ದು, ಕಣ್ಣನ್ನು ತೆಗೆಯಲೇಬೇಕಾದ ಅನಿವಾರ್ಯತೆ ಎದುರಾಗಿತ್ತು.
ಒಂದು ವೇಳೆ, ಕಣ್ಣು ಆಪರೇಷನ್ ಮಾಡಿ ತೆಗೆಯದೇ ಹೋದರೆ ಬಲಗಣ್ಣಿಗೂ ಕ್ಯಾನ್ಸರ್ ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದರು. ಕಳೆದ ಮೂರು ತಿಂಗಳ ಹಿಂದೆಯೇ ಶಸ್ತ್ರಚಿಕಿತ್ಸೆ ಮಾಡಿಸಲು ವೈದ್ಯರು ಸಲಹೆ ನೀಡಿದ್ದರು.
ಆದರೆ, ನವೀನ್ ತಂದೆ, ತಾಯಿಗೆ ಮಗನಿಗೆ ಶಸ್ತ್ರ ಚಿಕಿತ್ಸೆ ಮಾಡಿಸಲು ಆಗದ ಪರಿಸ್ಥಿತಿ ಇತ್ತಂತೆ. ಆಗ ನವೀನ್ ಕೊನೆಗೆ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿಯ ಸದಸ್ಯರನ್ನು ಸಂಪರ್ಕ ಮಾಡಿ, ಮಗುವಿನ ಆಪರೇಷನ್‌ಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು.
ಮಗುವಿನ ಆರೋಗ್ಯ ಪರಿಸ್ಥಿತಿ ಗಮನಿಸಿದ ಸುದೀಪ್ ಚಾರಿಟಬಲ್ ಸೊಸೈಟಿ, ಸುದೀಪ್ ಗಮನಕ್ಕೆ ತಂದಿದ್ದಾರೆ. ಕೂಡಲೆ ಸುದೀಪ್, ಧನುಷ್ ನಾಯಕ್ ,ಕಣ್ಣಿನ ಆಪರೇಷನ್ ಬೇಕಾಗುವ ಹಣದ ವ್ಯವಸ್ಥೆ ಮಾಡಿದ್ದಾರೆ. ಮೂಲಗಳ ಪ್ರಕಾರ ಸುದೀಪ್ 2 ರಿಂದ 3 ಲಕ್ಷ ರೂಪಾಯಿ ಹಣದ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ.
ಸದ್ಯ ಧನುಷ್ ನಾಯಕ್ ಕಣ್ಣಿನ ಆಪರೇಷನ್ ಯಶಸ್ವಿಯಾಗಿ ನಡೆದಿದ್ದು, ಕ್ಯಾನ್ಸರ್ ಆಗಿರುವ ಕಣ್ಣನ್ನು ತೆಗೆದು ಹಾಕಿ ಕೃತಕ ಕಣ್ಣು ಅಳವಡಿಸಿ ಅದಕ್ಕೆ ಲೆನ್ಸ್ ಹಾಕಲಾಗಿದೆ. ಈ ಮೂಲಕ ಶಿವಮೊಗ್ಗದ ಧನುಷ್ ನಾಯಕ್ ಬಾಳಿಗೆ ಕಿಚ್ಚ ಸುದೀಪ್ ಬೆಳಕಾಗಿದ್ದಾರೆ.