ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅವರ ಸಾಮಾಜಿಕ ಸೇವೆ ನಿರಂತರವಾಗಿ ಮುಂದುವರೆದಿದೆ. ಕೊರೊನಾ ಸಮಯದಲ್ಲಿ ಸಿನಿಕಾರ್ಮಿಕರಿಗೆ ಸಹಾಯ ಮಾಡಿದ್ದ ಸುದೀಪ್ ನಂತರ ಮುಸ್ಲಿಂ ಹೆಣ್ಣುಮಗಳ ಮದುವೆಗೆ ಹಣದ ಸಹಾಯ ಮಾಡಿದ್ದರು. ಇದೀಗ ಅವರು ವೃದ್ಧ ದಂಪತಿ ಬಾಳಿಗೆ ಬೆಳಕಾಗಿದ್ದಾರೆ.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ರಾಧಮ್ಮ ಹಾಗೂ ನಾಗರಾಜು ಎಂಬ ವೃದ್ಧ ದಂಪತಿ ಮನೆ ಪುರ್ನನಿರ್ಮಾಣ ಹಾಗೂ ವಿದ್ಯುತ್ ಸಂಪರ್ಕಕ್ಕೆ ಸುದೀಪ್ ತಮ್ಮ ಟ್ರಸ್ಟ್ ವತಿಯಿಂದ ಹಣ ಒದಗಿಸಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಸುಮಾರು 5 ವರ್ಷಗಳಿಂದ ಅರ್ಧದಲ್ಲೇ ನಿಂತಿದ್ದ ಮನೆ ಪುರ್ನನಿರ್ಮಾಣಕ್ಕೆ ಕಿಚ್ಚ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ಈ ವೃದ್ಧ ದಂಪತಿಗೆ ಒಬ್ಬನೇ ಮಗನಿದ್ದು ಆತ ವಿಶೇಷ ಚೇತನನಾಗಿದ್ದಾನೆ. ಹೀಗಾಗಿ ಮನೆ ಜವಾಬ್ದಾರಿ ಸಂಪೂರ್ಣ ಈ ವೃದ್ಧ ದಂಪತಿಗಳದ್ದೇ ಆಗಿದೆ.
ಇವರ ಸಮಸ್ಯೆ ಅರಿತ ಕಿಚ್ಚ ಸುದೀಪ್, ತಮ್ಮ ಟ್ರಸ್ಟ್ ಸಿಬ್ಬಂದಿಗೆ ಈ ಬಗ್ಗೆ ಗಮನ ಹರಿಸುವಂತೆ ಸೂಚಿಸಿದ್ದಾರೆ. ಸುಮಾರು 2 ಲಕ್ಷ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಮನೆ ಪುರ್ನನಿರ್ಮಾಣ ಮಾಡಿದ್ದು ಇದರೊಂದಿಗೆ ವಿದ್ಯುತ್ ಸಂಪರ್ಕ ಕೊಡಿಸಿದ್ದಾರೆ. ಸುದೀಪ್ ಅವರಿಂದ ಸಹಾಯ ಪಡೆದ ಈ ವೃದ್ಧ ದಂಪತಿ ಕಿಚ್ಚನಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸಿದ್ದಾರೆ.