ದುನಿಯಾ ವಿಜಯ್ ಅಭಿನಯಿಸಿ, ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ 'ಸಲಗ' ಚಿತ್ರ ರಾಜ್ಯಾದ್ಯಂತ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರೌಡಿಸಂ ಕಥೆ ಒಳಗೊಂಡಿರುವ 'ಸಲಗ' ಬಾಕ್ಸ್ ಆಫೀಸ್‌ನಲ್ಲೂ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಹೀಗಾಗಿ, ಸಲಗ ಸಿನಿಮಾವನ್ನ ಇಂದು ಮಾಲ್‌ವೊಂದರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನೋಡಿ ಮೆಚ್ಚಿದ್ದಾರೆ.
ಈ ಚಿತ್ರ ನೋಡಿದ ಬಳಿಕ ಮಾತನಾಡಿದ ಶಿವರಾಜ್ ಕುಮಾರ್, ಸಲಗ ಚಿತ್ರದಲ್ಲಿ ಬರುವ ಪ್ರತಿಯೊಂದು ಪಾತ್ರಗಳನ್ನ ಹೊಸತನದಿಂದ ಕೂಡಿವೆ. ದುನಿಯಾ ವಿಜಯ್ ಮೊದಲ ನಿರ್ದೇಶನದಲ್ಲಿ ಗೆದ್ದಿದ್ದಾರೆ. ವಿಜಯ್ ಸ್ಕ್ರೀನ್ ಪ್ಲೇ ಚೆನ್ನಾಗಿ ಮಾಡಿದ್ದಾರೆ. ಚಿತ್ರದಲ್ಲಿ ದುನಿಯಾ ವಿಜಯ್ ಬಾಲ್ಯದ ಪಾತ್ರವನ್ನ ರಂಗಾಯಣದ ಪ್ರತಿಭೆ ಶ್ರೀಧರ್ ಬಹಳ ಅಚ್ಚುಕಟ್ಟಾಗಿ ನಟಿಸಿದ್ದಾನೆ ಎಂದರು.
ಬೋಲ್ಡ್ ಪಾತ್ರದಲ್ಲಿ ನಟಿಸಿರೋ ಸಂಜನಾ ಆನಂದ್ ಅಭಿನಯದ ಬಗ್ಗೆ ಶಿವರಾಜ್ ಕುಮಾರ್ ಮೆಚ್ಚಿಕೊಂಡರು. ರೌಡಿಸಂ ಸಿನಿಮಾಗಳಿಗೆ ಓಂಕಾರ ಹಾಕಿದ್ದು ಉಪ್ಪಿ ಮತ್ತು ನಾನು. ಯಾರೇ ರೌಡಿಸಂ ಸಿನಿಮಾಗಳನ್ನ ಹೇಗೆ ಮಾಡಿದರು ಎಲ್ಲಾ ಓಂ ಸಿನಿಮಾ ಅಂತಾರೆ ಎಂದ ಶಿವಣ್ಣ, ಸಲಗ ಸಿನಿಮಾ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸದ್ಯ ಎರಡನೇ ವಾರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಲಗ ಸಿನಿಮಾದಲ್ಲಿ ಬರುವ ವಿಚಿತ್ರ ಹೆಸರಿನ ಪಾತ್ರಗಳು ಗಮನ ಸೆಳೆಯುತ್ತವೆ. ಸಾವಿತ್ರಿ ಪಾತ್ರ ಮಾಡಿರುವ ಸುಧೀ, ಕೆಂಡ ಪಾತ್ರಧಾರಿ ಶ್ರೇಷ್ಠ, ಯಶ್ ಶೆಟ್ಟಿ, ನೀನಾಸಂ ಅಶ್ವತ್ಥ್, ಚನ್ನಕೇಶವ, ಸಂಪತ್, ಜಹಾಂಗೀರ್ ಕೂಡ ತಮ್ಮ ಪಾತ್ರಗಳ ಮೂಲಕ ಸ್ಕ್ರೀನ್ ಮೇಲೆ ಮಿಂಚಿದ್ದಾರೆ.
ಸಲಗ ಸಿನಿಮಾದಲ್ಲಿ ಪ್ರತಿ ಪಾತ್ರಗಳು ಮಾಸ್ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಈಗ ಶಿವರಾಜ್ ಕುಮಾರ್ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿರೋದು ಸಲಗ ಚಿತ್ರಕ್ಕೆ ಮತ್ತಷ್ಟು ಪ್ಲಸ್ ಪಾಯಿಂಟ್ ಆಗಲಿದೆ. ದುನಿಯಾ ವಿಜಯ್ ಕೂಡ ನಾವು ಚಿಕ್ಕವನಿದ್ದಾನಿಂದಲೂ ಶಿವಣ್ಣನ ಸಿನಿಮಾಗಳನ್ನ ನೋಡಿ ಬೆಳೆದಿರೋದು ಅಂತಾ ಶಿವರಾಜ್ ಕುಮಾರ್ ಮುಂದೆ ಹೇಳಿಕೊಂಡ್ರು.