ಕೊರೊನಾದಿಂದ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ನಷ್ಟವಾಗಿರುವ ಹಿನ್ನೆಲೆ ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಅವರನ್ನು ಭೇಟಿಯಾಗಿ ಚಿತ್ರರಂಗದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಸ್ಯಾಂಡಲ್ವುಡ್ ಸಾರಥ್ಯ ವಹಿಸಿಕೊಂಡ ನಂತರ ಮುಖ್ಯಮಂತ್ರಿಗಳ ಭೇಟಿಗೂ ಮುನ್ನ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಅವರನ್ನು ಭೇಟಿ ಮಾಡಿದ ಶಿವಣ್ಣ, ಚಿತ್ರರಂಗದ ಬೇಡಿಕೆಗಳನ್ನು ಡಿಸಿಎಂ ಗಮನಕ್ಕೆ ತಂದಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಣ್ಣ ಇದು ಎಲ್ಲರಿಗೂ ಸಂಕಷ್ಟದ ಕಾಲ, ಚಿತ್ರರಂಗದ ಕಲಾವಿದರು, ನಿರ್ಮಾಪಕರು, ವಿತರಕರು, ಥಿಯೇಟರ್ ಮಾಲೀಕರು, ಸಿನಿ ಕಾರ್ಮಿಕರು ಹಾಗೂ ಕಿರುತೆರೆ ಕಲಾವಿದರ ಸಮಸ್ಯೆಗಳನ್ನು ಡಿಸಿಎಂ ಮುಂದಿಟ್ಟಿದ್ದೇನೆ. ಹಾಗೂ ಚಿತ್ರರಂಗದ ಅಭಿವೃದ್ಧಿಗೆ ಏನೆಲ್ಲಾ ಮಾಡಬೇಕು ಎಂಬುದನ್ನು ಚರ್ಚೆ ಮಾಡಿದ್ದೇವೆ. ಡಿಸಿಎಂ ಕಡೆಯಿಂದ ಉತ್ತಮ ಸ್ಫಂದನೆ ಸಿಕ್ಕಿದೆ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
ಚಿತ್ರರಂಗಕ್ಕಾಗಿ ಪ್ರತ್ಯೇಕ ಪ್ಯಾಕೇಜ್ ಏನೂ ಕೇಳಿಲ್ಲ. ಆದರೆ ಕೊರೊನಾದಿಂದ ಆಗಿರುವ ಸಮಸ್ಯೆ ಸರಿಪಡಿಸಬೇಕು ಎಂಬ ಚಿಂತನೆ ಇದೆ. ಆ ನಿಟ್ಟಿನಲ್ಲಿ ಮುಂದಿನ ವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದು, ಅದಕ್ಕೂ ಮುನ್ನ ನಮ್ಮ ಸಮಸ್ಯೆಗಳನ್ನು ಡಿಸಿಎಂ ಅವರ ಗಮನಕ್ಕೆ ತಂದಿದ್ದೇವೆ. ಇನ್ನು ಥಿಯೇಟರ್ ಓಪನ್ ಮಾಡುವ ಬಗ್ಗೆ ಚರ್ಚಿಸಿಲ್ಲ. ಕೊರೊನಾ ನಿಯಂತ್ರಣಕ್ಕೆ ಬಂದ ನಂತರ ಚಿತ್ರಮಂದಿರಗಳು ಓಪನ್ ಆಗಲಿವೆ ಎಂದು ಶಿವಣ್ಣ ಹೇಳಿದರು.
ನಂತರ ಮಾತನಾಡಿದ ಡಿಸಿಎಂ ಅಶ್ವತ್ಥ್ ನಾರಾಯಣ, ಸಮಗ್ರವಾಗಿ ಚಿತ್ರರಂಗದ ಪುನಶ್ಚೇತನ ಆಗಬೇಕು. ಚಿತ್ರರಂಗದ ಎಲ್ಲಾ ವಿಭಾಗಗಳನ್ನು ಗಮನಿಸಬೇಕು. ಜೊತೆಗೆ ಸದ್ಯದ ಪರಿಸ್ಥಿತಿಯಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವುದು ಬಹಳ ಮುಖ್ಯವಾಗಿದೆ. ಸಿಎಂ ಅವರಿಗೂ ಸಿನಿಮಾ ಕ್ಷೇತ್ರದಲ್ಲಿ ಬಹಳ ಆಸಕ್ತಿ ಇದೆ. ಸಿನಿ ಕಾರ್ಮಿಕರು ಯಾವುದೇ ಇಲಾಖೆ ಅಡಿಯಲ್ಲಿ ಇಲ್ಲ. ಸಿನಿಮಾ ಕಾರ್ಮಿಕರನ್ನು ಕಾರ್ಮಿಕ ಇಲಾಖೆಗೆ ಸೇರಿಸುವ ಬಗ್ಗೆ ಮಾತನಾಡಲಾಗಿದೆ. ಅಲ್ಲದೆ ಸಬ್ಸಿಡಿ ಹಣ ಬೇಗ ನಿರ್ಮಾಪಕರ ಕೈ ಸೇರುವಂತೆ ಮಾಡುವುದು, ಸಿನಿಮಾ ಥಿಯೇಟರ್ನಲ್ಲಿ ರಿಯಾಯಿತಿ ನೀಡುವುದು ಹಾಗೂ ಜಿಎಸ್ಟಿ ಕುರಿತಾಗಿ ಮಾತನಾಡಲಾಗಿದೆ.
ಇಷ್ಟೇ ಅಲ್ಲ, ಕಮರ್ಷಿಯಲ್ ಕ್ಯಾಟಗಿರಿಯಿಂದ ಚಿತ್ರಮಂದಿರಗಳನ್ನು ಹೊರ ತರಬೇಕು. ಹಾಗೂ ಚಿತ್ರರಂಗಕ್ಕೆ ಹೆಚ್ಚಿನ ಸವಲತ್ತು ನೀಡುವ ಬಗ್ಗೆ ಹೊಸ ಪಾಲಿಸಿಗಳನ್ಜು ರೂಪಿಸಬೇಕಿದೆ. ಇನ್ನು ಮುಂದಿನವಾರ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದು ಅವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಡಿಸಿಎಂ ಅಶ್ವತ್ಥ್ ನಾರಾಯಣ ಮಾಹಿತಿ ನೀಡಿದರು.