ಬೆಂಗಳೂರು: ದಿವಂಗತ ಸಂಚಾರಿ ವಿಜಯ್ ಅವರ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದು, 'ಪುಗ್ಸಟ್ಟೆ ಲೈಫು ಪುರಸೊತ್ತೇ ಇಲ್ಲ' ಚಿತ್ರವೂ ರಿಲೀಸ್‌ಗೆ ರೆಡಿಯಾಗಿದೆ.
ಇತ್ತೀಚೆಗಷ್ಟೇ ಈ ಚಿತ್ರದ ಟ್ರೈಲರ್ ಅನ್ನು ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಬಿ ಜಯಶ್ರೀ ಮುಂತಾದ ಅತಿಥಿಗಳ ಸಮ್ಮುಖದಲ್ಲಿ ಚಿತ್ರ ತಂಡ ಬಿಡುಗಡೆ ಮಾಡಿತ್ತು. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಟ್ರೈಲರ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿವೆ. ಅದರಲ್ಲಿಯೇ ಗೆಲುವಿನ ಘಮಲು ಕೂಡಾ ನಿಖರವಾಗಿ ತೇಲಿ ಬರುತ್ತಿದೆ.
ಆದರೆ, ಚಿತ್ರತಂಡದ ಮನಸಲ್ಲಿ ಮಾತ್ರ ವರ್ಷಗಟ್ಟಲೆ ಜೊತೆಯಾಗಿ ಬೆರೆತಿದ್ದ, ಈ ಚಿತ್ರದ ಕೇಂದ್ರಬಿಂದುವಾದ ಸಂಚಾರಿ ವಿಜಯ್ ಈ ಕ್ಷಣದಲ್ಲಿ ಇರಬೇಕಿತ್ತೆಂಬ ಎಂಬ ಭಾವನೆ ಮೂಡಿದೆ. ಪುಗ್ಸಟ್ಟೆ ಲೈಫು ಅರವಿಂದ್ ಕುಪ್ಳೀಕರ್ ನಿರ್ದೇಶನದ ಚಿತ್ರ. ಖುದ್ದು ಸಂಚಾರಿ ವಿಜಯ್ ಬಹುವಾಗಿ ಮೆಚ್ಚಿಕೊಂಡು, ಲೀಡ್ ರೋಲನ್ನು ನಟಿಸಿದ್ದ ಸಿನಿಮಾವಿದು.
ಎಲ್ಲಾ ಅತಿಥಿಗಳೂ ಕೂಡಾ ಸಂಚಾರಿ ವಿಜಯ್ ಎಂಬ ಪ್ರತಿಭಾವಂತ ನಟನ ಅಕಾಲಿಕ ನಿಧನಕ್ಕೆ ಮರುಗುತ್ತಲೇ ಈ ಟ್ರೈಲರ್ ಅನ್ನು ಲಾಂಚ್ ಮಾಡಿದ್ದರು. ಚಿತ್ರತಂಡವಂತೂ ವೇದಿಕೆಯಲ್ಲಿ ಒಂದು ಆಸನವನ್ನು ಖಾಲಿ ಬಿಟ್ಟು ಅದನ್ನು ಸಂಚಾರಿ ವಿಜಯ್‌ಗೆ ಸೀಮಿತ ಎಂಬಂತೆ ಬಿಂಬಿಸಿದ್ದು, ಅದೊಂದು ತೆರನಾದ ಭಾವುಕ ವಾತಾವರಣಕ್ಕೂ ಕಾರಣವಾಗಿತ್ತು.
ರಂಗಾಯಣ ರಘು ಅವರು ಸಂಚಾರಿ ವಿಜಯ್ ಅವರನ್ನು ಬಹು ಕಾಲದಿಂದ ಹತ್ತಿರದಿಂದ ಬಲ್ಲವರು. ವಿಜಯ್ ಎಂಬ ಪ್ರತಿಭೆ ನಟನಾಗಿ ಪಳಗಿಕೊಂಡಿದ್ದು ಅವರ ನೆರಳಿನಲ್ಲಿಯೇ. ಅಂಥಾ ವಿಜಯ್ ಜೊತೆಗೆ ನಟಿಸಿದ ಚಿತ್ರದ ಕಾರ್ಯಕ್ರಮವನ್ನು ಅವರಿಲ್ಲದ ಘಳಿಗೆಯಲ್ಲಿ ನಡೆಸಬೇಕಾಗದ ನೋವು ರಂಗಾಯಣ ರಘು ಮಾತಲ್ಲಿ ಸ್ಪಷ್ಟವಾಗಿಯೇ ಕಾಣಿಸುತ್ತಿತ್ತು.
ಇನ್ನು, ಸಂಚಾರಿ ನೆನಪಲ್ಲಿ ಅಕ್ಷರಶಃ ಭಾವುಕರಾಗಿ ಅವರೊಂದಿಗಿನ ಆರಂಭಿಕ ಕ್ಷಣಗಳನ್ನು ಮೆಲುಕು ಹಾಕಿದವರು ಅಚ್ಯುತ ಕುಮಾರ್. ದಾಸವಾಳ ಚಿತ್ರದ ಮೂಲಕ ಪರಿಚಿತರಾದ ಸಂಚಾರಿ ಪಾತ್ರವನ್ನು ಆವಾಹಿಸಿಕೊಳ್ಳುತ್ತಿದ್ದ ರೀತಿ, ಆ ನಂತರದ ರಾಷ್ಟ್ರ ಪ್ರಶಸ್ತಿ ಪಡೆಯುವಷ್ಟರ ಮಟ್ಟಿಗೆ ಬೆಳೆದು ನಿಂತ ವಿದ್ಯಮಾನಗಳನ್ನೆಲ್ಲ ಅಚ್ಯುತ್ ಕುಮಾರ್ ಮನ ಮುಟ್ಟುವಂತೆ ನೆನಪಿಸಿಕೊಂಡರು.
ಇಂತಹ ವಾತಾವರಣದಲ್ಲಿ ಬಿಡುಗಡೆಯಾಗಿರೋ ಪುಕ್ಸಟ್ಟೆ ಲೈಫು ಟ್ರೈಲರ್‌ಗೆ ವ್ಯಾಪಕ ಮನ್ನಣೆ ದೊರಕುತ್ತಿದೆ. ಚನ್ನಾಗಿ ಮೂಡಿ ಬಂದಿರೋ ಈ ಟ್ರೈಲರ್ ಅನ್ನು ವೀಕ್ಷಕರೆಲ್ಲ ಕೊಂಡಾಡುತ್ತಾ, ಸಿನಿಮಾ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಅಂದ ಹಾಗೆ, ಈ ಚಿತ್ರದಲ್ಲಿ ಸಂಚಾರಿ ವಿಜಯ್ ಬೀಗ ರಿಪೇರಿ ಮಾಡೋ ಕಾಯಕದ ಶಹ ಜಹಾನ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅತ್ತ ಬೀಗ ರಿಪೇರಿಯಿಂದ ಬರೋ ಕಾಸಿನಿಂದ ಸಂಸಾರದ ಭಾರ ಹೊರಲಾರದೇ ಕಂಗಾಲಾಗುವ ಶಹಜಹಾನ್ ಈ ವ್ಯವಸ್ಥೆಯ ಚಕ್ರಸುಳಿಗೆ ಸಿಕ್ಕಿ ನಲುಗುವ ಅಪರೂಪದ ಕಥೆಯೊಂದು ಪಕ್ಸಟ್ಟೆ ಲೈಫಿನೊಳಗಿದೆ.
ಒಟ್ಟಾರೆಯಾಗಿ, ಇದೊಂದು ಭಿನ್ನ ಕಥಾ ಹಂದರದ, ಹೊಸಾ ಅಲೆಯ ಚಿತ್ರ. ಚಿತ್ರದಲ್ಲಿ ಸಂಚಾರಿ ವಿಜಯ್‌ಗೆ ಜೋಡಿಯಾಗಿ ಮಾತಂಗಿ ಪ್ರಸನ್ನ ನಟಿಸಿದ್ದಾರೆ. ಅಚ್ಯುತ್ ಕುಮಾರ್ ಮತ್ತು ರಂಗಾಯಣ ರಘು ವಿಶಿಷ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುರೇಶ್ ಆರ್ಮುಗಂ ಸಂಕಲನ, ವಾಸು ಧೀಕ್ಷಿತ್ ಸಂಗೀತ ನಿರ್ದೇಶನ, ಪೂರ್ಣಚಂದ್ರ ತೇಜಸ್ವಿಯವರ ಹಿನ್ನೆಲೆ ಸಂಗೀತ ಮತ್ತು ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ. ನಾಗರಾಜ್ ಸೋಮಯಾಜಿ ಬಲು ಪ್ರೀತಿಯಿಂದ ನಿರ್ಮಾಣ ಮಾಡಿರುವ 'ಪುಕ್ಸಟ್ಟೆ ಲೈಫು ಪುರಸೊತ್ತೇ ಇಲ್ಲ' ಚಿತ್ರಮಂದಿರಗಳಿಗೆ ಎಂಟ್ರಿ ಕೊಡುವ ಸಿದ್ಧತೆಯಲ್ಲಿದೆ.