ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಅಕ್ಟೋಬರ್ 29ರಂದು ಹೃದಯಸ್ತಂಭನದಿಂದ ಇಹಲೋಕ ತ್ಯಜಿಸಿದ್ದರು. ಐದನೇ ದಿನವಾದ ಇಂದು ಕುಟುಂಬಸ್ಥರು ಹಾಲು-ತುಪ್ಪ ಕಾರ್ಯ ನೆರವೇರಿಸಿದರು.
ಈ ವೇಳೆ ಮಾತನಾಡಿದ ನಟ ರಾಘವೇಂದ್ರ ರಾಜ್ಕುಮಾರ್, 5ನೇ ದಿನ ಆಯಿತು. ಇನ್ನು ಮುಂದೆ 11ನೇ ದಿನಾನು ಬರುತ್ತೆ, ಮುಂದೆ 1 ವರ್ಷಾನೂ ಆಗುತ್ತೆ, ಹೀಗೆ ವರ್ಷಗಳು ಕಳೆಯುತ್ತಲೇ ಇರುತ್ತವೆ. ಆ ನೋವಿನ ಜತೆ ನಾವು ಬದುಕುತ್ತಲೇ ಇರಬೇಕು. ಯಾಕೆಂದರೆ ನಮಗೆ ಬೇರೆ ದಾರಿಯಿಲ್ಲ. ಇನ್ನು ಮುಂದೆ ಏನಿದ್ದರೂ ಈ ನೋವಿನ ಜತೆ ಬದುಕುವ ಶಕ್ತಿ ಕೊಡು ಅಂತಾ ಮಾತ್ರ ನಾನು ಪರಮಾತ್ಮನಲ್ಲಿ ಕೇಳಿಕೊಳ್ಳಬಲ್ಲೆ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ತಂದೆಯವರಿಗೆ ಆ ದೇವರು 75 ವರ್ಷ ಕೊಟ್ಟಿದ್ದ. ಇಷ್ಟೆಲ್ಲಾ ಮಾಡಿಕೊಂಡು ಬಾ ಅಂತ ಹೇಳಿದ್ದ. ಅವರು ಅಷ್ಟು ವರ್ಷ ಮುಗಿಸಿ ಹೋದರು. ನಿಮ್ಮ ಪುನೀತ್ಗೆ ಅಂದರೆ ನನ್ನ ತಮ್ಮನಿಗೆ ದೇವರು 45 ವರ್ಷದಲ್ಲಿ ಎಲ್ಲಾ ಮುಗಿಸಿಕೊಂಡು ಬಾ ಅಂತಾ ಬರೆದಿದ್ದ. ಹಾಗೆಯೇ ಅವರು ಮುಗಿಸಿದರು. 70 ವರ್ಷಕ್ಕೆ ಏನು ಹೆಸರು ಮಾಡಬೇಕಿತ್ತೋ ಅದನ್ನು 40 ವರ್ಷಕ್ಕೆ ಮಾಡಿದರು. ಅವಾರ್ಡ್ ತಗೊಂಡರು, ಅಭಿಮಾನಿಗಳನ್ನು ಗೆದ್ದರು. ಅವರ ಕೆಲಸ ಮುಗೀತು. ಅಷ್ಟೇ ದೇವರು ಅವರಿಗೆ ಟೈಂ ಕೊಟ್ಟಿದ್ದು ಎಂದು ಹತಾಶ ಭಾವನೆಯಿಂದ ದುಃಖ ತೋಡಿಕೊಂಡರು.
ನಾವು ಹೀಗೆ ಮುಂದಕ್ಕೆ ಸಾಗಬೇಕು. ಇದನ್ನು ಮರೆಯೋದಕ್ಕೆ ಸಾಧ್ಯವಿಲ್ಲ. ಇದರ ಜತೆ ಜೀವನ ಸಾಗಿಸೋಣ. ಈ ದುಃಖದ ನಡುವೆಯೂ ಸಂತೋಷದ ಸುದ್ದಿ ಎಂದರೆ ಅಪ್ಪು ಅವರ ಕಣ್ಣುಗಳಿಂದ 4 ಜನರಿಗೆ ದೃಷ್ಟಿ ಬಂದಿದೆ. ಅಪ್ಪು ಇನ್ನೂ ಈ ಪ್ರಪಂಚವನ್ನು ಈ ಮೂಲಕ ನೋಡುತ್ತಿದ್ದಾರೆ ಎಂದರು.
ಅಭಿಮಾನಿಗಳಿಗೆ, ಮುಖ್ಯಮಂತ್ರಿಗಳಿಗೆ, ಸರ್ಕಾರ, ಮೀಡಿಯಾದವರು ಈ ದುಃಖದ ಸಮಯದಲ್ಲಿ ನಮ್ಮ ಜೊತೆಗಿದ್ದರು. ಕೃತಜ್ಞತೆ ಹೇಳಿದರೆ ಅದು ತುಂಬಾ ಚಿಕ್ಕದಾಗಿ ಬಿಡುತ್ತೆ. ಮೂರು ದಿನ ನಮ್ಮ ಜತೆಗಿದ್ದರು. ನಮ್ಮ ಕುಟುಂಬದ ಮೇಲೆ ನೀವೆಲ್ಲರೂ ಇಟ್ಟ ಅಭಿಮಾನಕ್ಕೆ ಸಾಷ್ಟಾಂಗ ನಮಸ್ಕಾರ ಎಂದು ಹೇಳಿದರು.
ಇದನ್ನೂ ಓದಿ: ಅಪ್ಪುಗೆ ಇಂದು ಹಾಲು ತುಪ್ಪ ವಿಧಿವಿಧಾನ ಕಾರ್ಯ: ಪುನೀತ್ ಸಮಾಧಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್