ಬೆಂಗಳೂರು: ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಮಾತ್ರ ಆಸನ ಭರ್ತಿ ಮಾಡಬೇಕೆಂಬ ಸರ್ಕಾರದ ಆದೇಶದಿಂದ ಆಘಾತಕ್ಕೊಳಗಾಗಿರುವ ನಟ ಪುನೀತ್ ರಾಜ್‍ಕುಮಾರ್ ಇಂದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಭರ್ತಿಗೆ ಅವಕಾಶ ನೀಡುವಂತೆ ಸ್ಯಾಂಡಲ್ವುಡ್ ಪವರ್ ಸ್ಟಾರ್ ಮನವಿ ಮಾಡಿದ್ದಾರೆ.
ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಅಪ್ಪು, ಶೇ. 50ರ ಮಿತಿಯಿಂದ ಚಿತ್ರರಂಗಕ್ಕೆ ಸಾಕಷ್ಟು ನಷ್ಟ ಆಗಲಿದೆ. ಹೀಗಾಗಿ 100% ಆಸನಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದರು. ಪುನೀತ್ ಭೇಟಿ ವೇಳೆ ಗೃಹ ಸಚಿವರಾದ ಸಚಿವ ಬಸವರಾಜ್ ಬೊಮ್ಮಾಯಿ, ಡಿಸಿಎಂ ಲಕ್ಷ್ಮಣ್ ಸವದಿ, ಸಚಿವ ನಾರಾಯಣ ಗೌಡ ಉಪಸ್ಥಿತರಿದ್ದರು. ಪುನೀತ್ ರಾಜ್‍ಕುಮಾರ್ ಜೊತೆ ನಿರ್ದೇಶಕ ಸಂತೋಷ ಆನಂದ್ ರಾಮ್, ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಂಗದೂರ್, ಕಾರ್ತಿಕ್ ಗೌಡ ಸಹ ಉಪಸ್ಥಿತರಿದ್ದರು. ನಟ ಪುನೀತ್ ರಾಜ್ ಕುಮಾರ್ ಮನವಿ ಸ್ವೀಕರಿಸಿರುವ ಸಿಎಂ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದು, ತಜ್ಞರ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಯುವರತ್ನ ನೋಡಲು ಫ್ಯಾಮಿಲಿಗಳು ಬರ್ತಿವೆ, ಈ ರೀತಿಯಾದ್ರೆ ಚಿತ್ರರಂಗ ಉಳಿಯೋದ್ಹೇಗೆ?.. ನಟ ದುನಿಯಾ ವಿಜಿ
ನಟ ಪುನೀತ್ ರಾಜ್‍ಕುಮಾರ್ ನಟನೆಯ ಬಹುನಿರೀಕ್ಷಿತ ಯುವರತ್ನ ಚಿತ್ರ ರಾಜ್ಯಾದ್ಯಂತ ಏಪ್ರಿಲ್ 1ರಂದು ರಿಲೀಸ್ ಆಗಿದ್ದು, ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಇದರ ಮಧ್ಯೆ ಶುಕ್ರವಾರ ರಾಜ್ಯ ಸರ್ಕಾರ ಸಿನಿಮಾ ಮಂದಿರಗಳಲ್ಲಿ ಶೇ.50ರಷ್ಟು ಆಸನಗಳಿಗೆ ಮಾತ್ರ ಅವಕಾಶ ನೀಡಿ ಆದೇಶ ಹೊರಡಿಸಿದೆ. ಇದು ಚಿತ್ರರಂಗದವರದ ಆತಂಕಕ್ಕೆ ಕಾರಣವಾಗಿದ್ದು, ಆಕ್ಷೇಪಗಳು ವ್ಯಕ್ತವಾಗಿವೆ.