ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಅಷ್ಟೇ ಅಲ್ಲದೆ, ವಿವಿಧ ಚಿತ್ರರಂಗಗಳಲ್ಲಿ ಅಭಿನಯಿಸಿ ಅಪಾರ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದ ಕನ್ನಡತಿ, ಅಭಿನಯ ಶಾರದೆ, ನಟಿ ಜಯಂತಿ ಮೃತದೇಹದ ಅಂತಿಮ ದರ್ಶನ ಪಡೆದ ನಟರಾದ ಪುನೀತ್ ರಾಜಕುಮಾರ್, ಜಯಮಾಲಾ, ಜಗ್ಗೇಶ್ ಅವರು ಜಯಂತಿ ಜೊತೆಗಿನ ಒಡನಾಟ ಮತ್ತು ವ್ಯಕ್ತಿತ್ವದ ಕುರಿತು ಮಾತುಗಳನ್ನಾಡಿದರು.
ಜಯಂತಿ ಸಿನಿಮಾ ಬಗ್ಗೆ ಮಾತನಾಡಲು ನಾನು ಚಿಕ್ಕವ: ನಟ ಪುನೀತ್
ತಂದೆ ಜೊತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. ಅವರ ಸಿನಿಮಾ ಬಗ್ಗೆ ಮಾತನಾಡಲು ನಾನು ಚಿಕ್ಕವನು. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ ಎಂದು ನಟ ಪುನೀತ್ ರಾಜ್ಕುಮಾರ್ ಭಾವುಕ ನುಡಿಗಳನ್ನಾಡಿದರು.
ಅದ್ಭುತ ಹೆಣ್ಣು, ಮಹಿಳೆಯರು, ಮಕ್ಕಳಿಗೆ ಸ್ಫೂರ್ತಿ: ನಟ ಜಗ್ಗೇಶ್
ನವರಸ ನಾಯಕ್ ಜಗ್ಗೇಶ್ ಮಾತನಾಡಿ, ಬೆಳಗ್ಗಿನ ಜಾವದಲ್ಲಿ ಚಿರನಿದ್ರೆಗೆ ಹೋಗಿದ್ದಾರೆ ಎಂದಾಗ ಪರಿಶುದ್ಧ ಆತ್ಮ ಅಂದುಕೊಂಡೆ. ನನಗೂ ತಾಯಿ ಪಾತ್ರ ಮಾಡಿದ್ದಾರೆ. ಅದ್ಭುತವಾದ ಹೆಣ್ಣು, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸ್ಫೂರ್ತಿ. ಒಂಟಿ ಚಿರತೆಯ ಹಾಗೆ ಅವರು ಬದುಕಿದ್ದರು ಎಂದರು.
ಸೌಮ್ಯ ಸ್ವರೂಪಿ, ಅವರ ಸ್ನೇಹ ಮರೆಯುವ ಹಾಗಿಲ್ಲ: ಡಿಕೆಶಿ
ಅಂತಿಮ ದರ್ಶನದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಬಹುಭಾಷಾ ನಟಿ ಜಯಂತಿ 40 ವರ್ಷದಿಂದ ನನಗೆ ಪರಿಚಯ. ನನ್ನ ಕುಟುಂಬದ ಶುಭ ಕಾರ್ಯಕ್ಕೆ ಬಂದು ಆಶೀರ್ವದಿಸಿದ್ದರು. ಬಹಳ ಸೌಮ್ಯ ಸ್ವರೂಪಿ, ಅವರ ಸ್ನೇಹ ಮರೆಯುವ ಹಾಗಿಲ್ಲ, ಅವರು ಕಲಾತಂಡಕ್ಕೆ ಆಸ್ತಿ, ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದರು.
ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು: ಜಯಮಾಲಾ
ಜಯಂತಿ ನಿಧನದ ಬಗ್ಗೆ ಕಂಬನಿ ಮಿಡಿದ ಜಯಮಾಲ, ಜಯಂತಿ ಅವರು ಎಷ್ಟು ಸ್ನೇಹ ಜೀವಿ ಅಂದ್ರೆ ಯಾವುದೇ ಕೆಡುಕನ್ನೂ ಬಯಸದೆ, ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. ಸಿನಿಮಾದ ಅಡಿಷನ್ ಸಂದರ್ಭದಲ್ಲಿ ನನಗೆ ತುಂಬಾನೇ ಸಹಾಯ ಮಾಡಿದ್ದರು. ಇನ್ನು ನನ್ನ ನಿರ್ಮಾಣದ ಸಂಸ್ಥೆಯಲ್ಲಿ ಅವರು ನಟಿಸಿರೋದು ನನ್ನ ಭಾಗ್ಯ. ಕನ್ನಡ ಚಿತ್ರರಂಗ ಜಯಂತಿ ಅಂತಹ ಮಹಾನ್ ನಟಿಯನ್ನು ಕಳೆದುಕೊಂಡಿದೆ ಎಂದು ಜಯಂತಿ ಅವರ ಒಡನಾಟದ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡರು.
ಅಪರೂಪದ ಕಲಾವಿದೆ ಸಿಗಬೇಕಾದ ಗೌರವ ಸಿಗಲಿಲ್ಲ: ಸುಧಾರಾಣಿ ಬೇಸರ
ಜಯಂತಿ ಅಮ್ಮನ ನಿಧನ ನನಗೆ ಆಘಾತ ನೀಡಿದೆ. ಇತ್ತೀಚೆಗೆ ಅವರಿಗೆ ಇಷ್ಟ ಅಂತ ನಾನು ನೇಲ್ ಪಾಲಿಶ್ ತಗೊಂಡಿದ್ದೆ. ಕೊಡ್ಬೇಕು ಅಂತ ಇದ್ದೆ, ಆದ್ರೆ ವಿಧಿಯಾಟ ಹೀಗಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಅಪರೂಪ ಕಲಾವಿದೆಗೆ ಸಿಗಬೇಕಾಗಿದ್ದ ಗೌರವ ಸಿಕ್ಕಿಲ್ಲ ಅದು ಬೇಸರ ಉಂಟು ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.