ಅಮಲಪುರಂ ಪಟ್ಟಣ (ಆಂಧ್ರ ಪ್ರದೇಶ): ಎರಡು ತಿಂಗಳ ಮಗುವಿನ ಹೃದಯ ಕಸಿಗಾಗಿ ಆರ್ಥಿಕ ನೆರವು ನೀಡುವ ಮೂಲಕ ನಮ್ಮ ಕಂದನಿಗೆ ಪುನರ್ಜನ್ಮ ಕೊಟ್ಟಿದ್ದಾರೆ ಎಂದು ಪ್ರದೀಪ್, ನಾಗಜ್ಯೋತಿ ದಂಪತಿ ನಟ ಮಹೇಶ್ಬಾಬು ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಮೊದಲು ಮಗುವಿನ ಆರೋಗ್ಯ ಚೆನ್ನಾಗಿತ್ತು. ಕೆಲವು ದಿನಗಳ ನಂತರ ಅನಾರೋಗ್ಯ ಕಾಣಿಸಿಕೊಂಡಿತು. ಆಗ ಅಮಲಾಪುರದ ಆಸ್ಪತ್ರೆಯಲ್ಲಿ ಸೇರಿಸಲಾಗಿತ್ತು. ಅಪರೂಪದ ಹೃದಯ ರೋಗದಿಂದ ಮಗು ಬಳಲುತ್ತಿದೆ ಎಂದು ವೈದ್ಯರು ಪೋಷಕರಿಗೆ ತಿಳಿಸಿದರು.

ವಿಷಯ ತಿಳಿದು ಅಮಲಾಪುರ ಪಟ್ಟಣದ ಮಹೇಶ್ಬಾಬು ಅಭಿಮಾನಿಗಳ ಸಂಘದ ಅಧ್ಯಕ್ಷ ಕೊಪ್ಪಿಶೆಟ್ಟಿ ನರಸಿಂಹರಾವು ಅವರು, ಮಹೇಶ್ಬಾಬು ಟ್ರಸ್ಟ್ ಬೋರ್ಡ್ ಸದಸ್ಯರ ಗಮನಕ್ಕೆ ತಂದರು.
ಮೇ 31ರಂದು ಸೂಪರ್ಸ್ಟಾರ್ ಕೃಷ್ಣ ಅವರ ಜನ್ಮದಿನದ ಮರುದಿನ ಆಂಧ್ರದ ವಿಜಯವಾಡದ ಆಸ್ಪತ್ರೆಯೊಂದಕ್ಕೆ ಮಗುವನ್ನು ದಾಖಲು ಮಾಡಲಾಯಿತು. ಅದಕ್ಕೆ ಮಹೇಶ್ಬಾಬು ಅವರು ಹಣಕಾಸು ನೆರವು ನೀಡಿದರು. ಜೂನ್ 2ರಂದು ಶಸ್ತ್ರಚಿಕಿತ್ಸೆ ಮಾಡಿ ಮಗುವಿಗೆ ಮರುಜೀವ ನೀಡಲಾಯಿತು.