ಕನ್ನಡದ ಕೆಲವು ಹ್ಯಾಂಡ್ಸಮ್ ನಟರುಗಳ ಪೈಕಿ ಹರೀಶ್ ರಾಜ್ ಸಹ ಒಬ್ಬರು. ಕಿರುತೆರೆ, ಸಿನಿಮಾ, ರಂಗಭೂಮಿ, ಜಾಹೀರಾತು, ಸಾಕ್ಷ್ಯ ಚಿತ್ರ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಇವರು ಕಲಾಕೃಷಿ ಮಾಡಿದ್ದಾರೆ. ಕಿರುತೆರೆಯಲ್ಲಿ ಫೇಮಸ್ ಆಗಿದ್ದ 'ಹೋಗ್ಲಿ ಬಿಡಿ ಸಾರ್' ಧಾರವಾಹಿಯಲ್ಲಿ ಇವರು ನಟಿಸಿದ್ದರು. ‘ಗನ್’ ಸಿನಿಮಾ ಮೂಲಕ ನಿರ್ದೇಶಕ ಸಹ ಆದವರು. ಇವರು 16 ಪಾತ್ರಗಳಲ್ಲಿ ಅಭಿನಯಿಸಿದ್ದ ‘ಶ್ರೀ ಸತ್ಯನಾರಾಯಣ’ ಸಿನಿಮಾ ಲಿಮ್ಕಾ ದಾಖಲೆ ಪುಸ್ತಕ ಸೇರಿತ್ತು. ಮಲಯಾಳಂನ ಮೋಹನ್ ಲಾಲ್ ಪುತ್ರ ನಾಯಕನಾಗಿರುವ ಸಿನಿಮಾದಲ್ಲಿಯೂ ಇವರು ಅಭಿನಯಿಸಿದ್ದರು. ಈಗ ‘ಕಿಲಾಡಿ ಪೊಲೀಸ್’ ಆಗಿ ನಗೆ ನಟ ಗಿರೀಶ್ ಜೊತೆ ಅಭಿನಯಿಸಿದ್ದಾರೆ. ಇವರೇ ಈ ಚಿತ್ರದ ನಿರ್ದೇಶಕರೂ ಸಹ.
ಎಚ್.ಆರ್.ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಈ ಚಿತ್ರಕ್ಕೆ, ಬೆಂಗಳೂರು ಸುತ್ತಮುತ್ತ 40 ದಿವಸಗಳ ಚಿತ್ರೀಕರಣ ಆಗಿದೆ. ಅಪ್ಪ ಮಗನ ಬಾಂಧವ್ಯ, ಹಾಸ್ಯ, ಸುಮಧುರ ಹಾಡುಗಳು, ಸಾಹಸ ಸಹ ‘ಕಿಲಾಡಿ ಪೊಲೀಸ್’ ಅಳವಡಿಸಿದೆ.
ಎಲ್ವಿನ್ ಜೋಶ್ ಸಂಗೀತ, ದೀಪಕ್ ಕುಮಾರ್ ಛಾಯಾಗ್ರಹಣ, ಸುರೇಶ್-ಜೀವನ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ, ಮುರಳಿ ನೃತ್ಯ ನಿರ್ದೇಶನವಿದೆ. ವಿ ಮನೋಹರ್, ಸಂತೋಷ್ ನಾಯಕ್ ಹಾಗೂ ಹರೀಶ್ ರಾಜ್ ಹಾಡುಗಳನ್ನು ರಚಿಸಿದ್ದಾರೆ.
ಸಂವಿ ಪೊನ್ನಮ್ಮ ನಾಯಕಿ, ಶ್ರೀನಿವಾಸಮೂರ್ತಿ, ಪದ್ಮಾ ವಾಸಂತಿ, ಸುಚೀಂದ್ರ ಪ್ರಸಾದ್, ಶೋಭರಾಜ್, ಗಿರಿ, ಮುನಿ, ಮೋಹನ್ ಜುನೇಜ, ರಮೇಶ್ ಪಂಡಿತ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ.