ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಪ್ರಿಯರ ಗೋಲ್ಡನ್ ಸ್ಟಾರ್ ಆಗಿರುವ ನಟ ಗಣೇಶ್, ಸದ್ಯ ಗಾಳಿಪಟ 2, ಸಖತ್, ತ್ರಿಬಲ್ ರೈಡಿಂಗ್ ಹೀಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನ ಮಾಡ್ತಾ ಇದ್ದಾರೆ. ಗಣೇಶ್ ಇದೇ ಜುಲೈ 2 ಗಣೇಶ್ಗೆ ಹುಟ್ಟುಹಬ್ಬದ ದಿನವಾಗಿದ್ದು, 40ನೇ ವಸಂತಕ್ಕೆ ಕಾಲಿಡಲಿದ್ದಾರೆ. ಗಣೇಶ್ ಕಳೆದ ವರ್ಷದಂತೆ, ಈ ವರ್ಷವು ಅಭಿಮಾನಿಗಳ ಜೊತೆ ತಮ್ಮ ಜನ್ಮದಿನ ಆಚರಿಸದಿರಲು ತೀರ್ಮಾನಿಸಿದ್ದಾರೆ.
ಕಳೆದ ಬಾರಿ ಗಣೇಶ್ ತಂದೆ ಕಿಶನ್ ಅಗಲಿಕೆಯಿಂದ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಮನಸ್ಸು ಮಾಡಿರಲಿಲ್ಲ. ಈ ವರ್ಷವು ಕೂಡ ಗಣೇಶ್ ಕೊರೊನಾ ಎರಡನೇ ಅಲೆಯಿಂದಾಗಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸದಿರಲು ನಿರ್ಧರಿಸಿದ್ದು, ಪತ್ರದ ಮೂಲಕ ಅಭಿಮಾನಿಗಳಿಗೆ ಈ ವರ್ಷ ಹುಟ್ಟು ಹಬ್ಬ ಆಚರಿಸುತ್ತಿಲ್ಲ ಎಂದು ಮನವಿ ಮಾಡಿದ್ದಾರೆ.
ಪ್ರತಿ ವರ್ಷವೂ ನನ್ನ ಜನ್ಮದಿನವನ್ನು ಹಬ್ಬದಂತೆ ಆಚರಿಸಿ ಆಶೀರ್ವದಿಸುತ್ತಾ ಬಂದಿರುವಿರಿ. ಆದರೆ ಈ ವರ್ಷ ಕೊರೊನಾ ಮಹಾಮಾರಿಯ ಆರ್ಭಟಕ್ಕೆ ಸಿಲುಕಿ ನನ್ನ ಹಲವು ಸಿನಿಮಾ ಸಹೋದ್ಯೋಗಿಗಳು, ಆತ್ಮೀಯರು, ಗೆಳೆಯರು ಬಲಿಯಾದದ್ದು ನೋವು ತರಿಸಿದೆ. ಅದೆಷ್ಟೋ ಜನರ ಜೀವನ ನಲುಗಿ ಹೋಗಿದೆ. ಇಷ್ಟೆಲ್ಲ ನೋವುಗಳ ನಡುವೆ ಸಂಭ್ರಮಕ್ಕಿದು ಸರಿಹೊಂದುವ ಸಮಯವಲ್ಲವೆಂದಿನಿಸಿ ಈ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ಇಚ್ಛಿಸಿರುತ್ತೇನೆ. ಅಲ್ಲದೇ ಜನ್ಮದಿನದಂದು ನಾನು ಹೊರಾಂಗಣ ಚಿತ್ರೀಕರಣದಲ್ಲಿ ತೊಡಗಿರುತ್ತೇನೆ. ಪ್ರತಿ ವರ್ಷವೂ ಪ್ರೀತಿಯಿಂದ ಹುಟ್ಟುಹಬ್ಬ ಆಚರಣೆಗೆ ನೀವುಗಳು ಪ್ರೀತಿಯಿಂದ ತರುವ ಕೇಕ್, ಹಾರ, ಉಡುಗೊರೆ ಮುಂತಾದವುಗಳಿಗಾಗಿ ಈ ವರ್ಷ ಹಣ ವ್ಯಯಿಸದೆ, ಅದೇ ಖರ್ಚಿನ ಮೊತ್ತವನ್ನು ಕೊರೊನಾ ಸಂಕಷ್ಟದಲ್ಲಿರುವ ಮತ್ತಷ್ಟು ಜೀವಗಳಿಗೆ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತೇನೆ. ಅದೇ ನನಗೆ ಶ್ರೀರಕ್ಷೆ ಎಂದು ಗಣೇಶ್ ಪತ್ರದಲ್ಲಿ ಬರೆದಿದ್ದಾರೆ.
ಗಣೇಶ್ ಸಿನಿಮಾ ವಿಚಾರಕ್ಕೆ ಬರೋದಾದ್ರೆ, ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನದ ಸಖತ್, ದಿ ಸ್ಟೋರಿ ಆಫ್ ರಾಯಗಢ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಯೋಗರಾಜ್ ಭಟ್ ಅವರ ಗಾಳಿಪಟ-2 ಹಾಗೂ ಪ್ರಶಾಂತ್ ರಾಜ್ ಅವರ ಪ್ರೊಡಕ್ಷನ್ ನಂ 7 ಮತ್ತು ಮಹೇಶ್ ಗೌಡ ನಿರ್ದೇಶನದ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಗೋಲ್ಡನ್ ಸ್ಟಾರ್ ಗಣೇಶ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಕೊರೊನಾ ಲಾಕ್ಡೌನ್ ಮುಗಿದ ನಂತರ ಒಂದೊಂದೇ ಸಿನಿಮಾಗಳು ತೆರೆ ಮೇಲೆ ಬರಲಿವೆ.