ನಟ ಧನಂಜಯ್ ಅಭಿನಯದ ಜತೆಗೆ ಬರವಣಿಗೆಯತ್ತ ಗಮನ ಹರಿಸಿದ್ದಾರೆ. ಸಾಮಾನ್ಯವಾಗಿ ನಟ-ನಟಿಯರು ಸಾಹಿತ್ಯದ ಒಲವು ಬೆಳಸಿಕೊಳ್ಳುವುದು ಕಡಿಮೆ. ಆದರೆ, ಚಂದನವನದ ಸಾಕಷ್ಟು ತಾರೆಯರು ಸಾಹಿತ್ಯದಲ್ಲಿ ಸಾಕಷ್ಟು ಕೃಷಿ ಮಾಡುತ್ತಿದ್ದಾರೆ.
ಈಗ ನಟ ಡಾಲಿ ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರಕ್ಕೆ ಒಂದು ಹಾಡು ಬರೆದಿದ್ದಾರೆ. ಧನಂಜಯ್ ವಿರಚಿತ ‘ಜೀವಕ್ಕಿಲ್ಲಿ ಜೀವಬೇಟೆ ಪಾಪಿ ಯಾರೋ ಇಲ್ಲಿ' ಗೀತೆಗೆ ಮಿದುನ್ ಮುಕುಂದನ್ ರಾಗ ಸಂಯೋಜನೆ, ಕಾರ್ತಿಕ್, ನಾರಾಯಣ ಶರ್ಮಾ ಹಾಗೂ ಮಿದುನ್ ಮುಕುಂದನ್ ಧ್ವನಿಗೂಡಿಸಿದ್ದಾರೆ. ಬಹಳ ಅರ್ಥಗರ್ಭಿತವಾದ ಈ ಹಾಡು ಚಿತ್ರದ ಕ್ಲೈಮ್ಯಾಕ್ಸ್ ಮುಂಚೆ ತೆರೆಯ ಮೇಲೆ ಮೂಡಿಬರಲಿದೆ.
ಅಂದಹಾಗೆ ಇದೇ 24 ರಂದು ಬಿಡುಗಡೆಗೆಯಾಗಲಿರುವ ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರದ ಈ ಹಾಡು ಇಂದು ಸಂಜೆ 5 ಗಂಟೆಗೆ ಯುಟ್ಯೂಬ್ನಲ್ಲಿ ರಿಲೀಸ್ ಆಗುತ್ತಿದೆ. ನಿರ್ದೇಶಕ ಶಂಕರ್ ಪ್ರಕಾರ ಅವರು ಅಂದುಕೊಂಡದಕ್ಕಿಂತ ಹಾಡು ಚೆನ್ನಾಗಿ ಮೂಡಿಬಂದಿದೆಯಂತೆ.
ಈ ಚಿತ್ರದಲ್ಲಿ ತಾಯಿಯಾಗಿ ಸುಮಲತಾ ಅಂಬರೀಶ್ ಹಾಗೂ ನಾಯಕಿಯಾಗಿ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಹರಿಪ್ರಿಯಾ ಅಭಿನಯಿಸಿದ್ದಾರೆ. ಮೊದಲಿನಿಂದಲೂ ನಾಟಕ ಹಾಗೂ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡು ಬಂದಿರುವ ಧನಂಜಯ್, ಡೈರೆಕ್ಟರ್ ಸ್ಪೆಷಲ್ ಚಿತ್ರದ ಮೂಲಕ ನಾಯಕನಾಗಿ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಡಾ. ಶಿವರಾಜಕುಮಾರ್ ಅವರ ‘ಟಗರು’ ಸಿನಿಮಾ ಮೂಲಕ ಖಳನಟನಾಗಿ ಮಿಂಚಿದರು. ಇದೀಗ ಕವಿಯಾಗಿದ್ದಾರೆ. ಅವರ ಈ ಪ್ರತಿಭೆ ಅನಾವರಣಕ್ಕೆ ಪ್ರೇಕ್ಷಕರು ಹೇಗೆ ಸ್ಪಂದಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.