ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅಭಿಮಾನಿಗಳು ಎಷ್ಟು ಇಷ್ಟಪಡುತ್ತಾರೋ ದರ್ಶನ್ ಕೂಡಾ ಅಭಿಮಾನಿಗಳನ್ನು ಅಷ್ಟೇ ಗೌರವಿಸುತ್ತಾರೆ. ಅಭಿಮಾನಿಗಳು, ಸೆಲಬ್ರಿಟಿಗಳು ಎನ್ನದೆ ಎಲ್ಲರೊಂದಿಗೂ ಅವರು ಬಹಳ ಸ್ನೇಹ, ವಿಶ್ವಾಸದಿಂದ ಇರುತ್ತಾರೆ.
ಲಾಕ್ಡೌನ್ ದಿನಗಳಲ್ಲಿ ಮೈಸೂರಿನ ತಮ್ಮ ಫಾರಂಹೌಸ್ನಲ್ಲಿ ಪ್ರಾಣಿಪಕ್ಷಿಗಳೊಂದಿಗೆ ಕಾಲ ಕಳೆದ ಚಾಲೆಂಜಿಂಗ್ ಸ್ಟಾರ್, ಇದೀಗ ಪುಟ್ಟ ಮಗುವಿನೊಂದಿಗೆ ಕಾಲ ಕಳೆದು ಎಂಜಾಯ್ ಮಾಡಿದ್ದಾರೆ. ಎಷ್ಟೇ ದೊಡ್ಡವರಾದರೂ ಮಕ್ಕಳೊಂದಿಗೆ ಮಗುವಾಗುತ್ತಾರೆ ಎಂಬಂತೆ ದರ್ಶನ್ ಕೂಡಾ ಪುಟ್ಟ ಮಗುವಿನೊಂದಿಗೆ ಆಟವಾಡಿದ್ದಾರೆ. ದರ್ಶನ್ ಮನೆಯಲ್ಲಿ ಇದ್ಯಾವುದಪ್ಪಾ ಪುಟ್ಟ ಮಗು ಎಂದು ಯೋಚಿಸುತ್ತಿದ್ದೀರ..? ಆ ಮಗು ದರ್ಶನ್ ಅವರ ಸ್ನೇಹಿತರ ಮೊಮ್ಮಗು. ದುನಿಯಾ ವಿಜಯ್ ಅಭಿನಯದ 'ಜಯಮ್ಮನ ಮಗ', ಶರಣ್ ಅಭಿನಯದ 'ಜೈ ಮಾರುತಿ 800' ಸಿನಿಮಾಗಳ ನಿರ್ಮಾಪಕ ರಮೇಶ್ ದರ್ಶನ್ಗೆ ಬಹಳ ಆಪ್ತರು.
ಇನ್ನು ರಮೇಶ್ ಅವರ ಅಳಿಯ ಚೇತನ್ ರಾಜ್ ಕೂಡಾ 'ಕಮರೊಟ್ಟು ಚೆಕ್ಪೋಸ್ಟ್' ನಿರ್ಮಾಪಕ. ಚೇತನ್ ಕೂಡಾ ದರ್ಶನ್ ಅವರಿಗೆ ಆತ್ಮೀಯರು. ಹೀಗಾಗಿ ರಮೇಶ್ ಅವರ ಮನೆಯಲ್ಲಿ ಯಾವುದೇ ಸಮಾರಂಭ ಇದ್ದು ದರ್ಶನ್ಗೆ ಆಹ್ವಾನ ನೀಡಿದರೆ, ದರ್ಶನ್ ಕೂಡಾ ತಪ್ಪದೆ ಬಂದು ಕಷ್ಟ, ಸುಖಗಳಲ್ಲಿ ಭಾಗಿಯಾಗುತ್ತಾರೆ. ಇತ್ತೀಚೆಗೆ ದರ್ಶನ್ ರಮೇಶ್ ಅವರ ಮನೆಗೆ ತೆರಳಿ ನಾನ್ ವೆಜ್ ಊಟ ತಿಂದು, ರಮೇಶ್ ಅವರ ಮೊಮ್ಮಗುವನ್ನು ತಮ್ಮ ತೊಡೆ ಮೇಲೆ ಕೂರಿಸಿಕೊಂಡು ಮಗುವಿಗೂ ಊಟ ತಿನ್ನಿಸಿದ್ದಾರೆ. ತಮ್ಮ ಮೊಬೈಲನ್ನು ಮಗುವಿಗೆ ನೀಡಿ ಆಟವಾಡುತ್ತಿರುವ ಮಗುವನ್ನು ನೋಡಿ ಸಂತೋಷಪಟ್ಟಿದ್ದಾರೆ.
ಬಹಳ ಹೊತ್ತು ಮಗುವಿನೊಂದಿಗೆ ಕಾಲ ಕಳೆದ ದರ್ಶನ್, ಮಗುವಿನೊಂದಿಗೆ ತಾವೂ ಕೂಡಾ ಪುಟ್ಟ ಮಗುವಾಗಿ ಖುಷಿ ಪಟ್ಟಿದ್ದಾರೆ. ಅಭಿಮಾನಿಗಳು ಕೂಡಾ ದರ್ಶನ್ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.