ಗಾನ ಗಂಧರ್ವ ಎಸ್.ಪಿ. ಬಾಲಸುಬ್ರಮಣ್ಯಂ ಶೀಘ್ರ ಗುಣಮುಖರಾಗಲಿ ಎಂದು ದೇಶಾದ್ಯಂತ ಅಭಿಮಾನಿಗಳು, ಸಂಗೀತ ಪ್ರೇಮಿಗಳು ಹಾಗೂ ಚಿತ್ರರಂಗದ ಗಣ್ಯರು ಹಾರೈಸುತ್ತಿದ್ದಾರೆ. ಎಸ್ಪಿಬಿ ಆರೋಗ್ಯಕ್ಕಾಗಿ ನಿನ್ನೆ ಸಂಜೆ ಕೂಡಾ ಚೆನ್ನೈನಲ್ಲಿ ಪ್ರಾರ್ಥನೆ ಆಯೋಜಿಸಲಾಗಿತ್ತು.
ಸ್ಯಾಂಡಲ್ವುಡ್ ನಟ-ನಟಿಯರೂ ಕೂಡಾ ಎಸ್ಪಿಬಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಶೀಘ್ರವೇ ಗುಣಮುಖರಾಗಿ ವಾಪಸ್ ಬನ್ನಿ. ನೀವು ನಮ್ಮ ಸಿನಿಮಾಗಾಗಿ ಮತ್ತೆ ಹಾಡಬೇಕು, ನಿಮ್ಮ ಮತ್ತೆ ಹಾಡುಗಳನ್ನು ಹಾಡಬೇಕು ಎಂದು ಹಾರೈಸುತ್ತಿದ್ದಾರೆ. ಆ ದಿನಗಳು ಖ್ಯಾತಿಯ ನಟ ಚೇತನ್ ಕೂಡಾ ಎಸ್.ಪಿ. ಬಾಲಸುಬ್ರಮಣ್ಯಂ ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ನಾವು ಎಸ್ಪಿಬಿ ಅವರ ಹಾಡುಗಳನ್ನು ಕೇಳುತ್ತಾ ಬೆಳೆದವರು. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.
'ಮಾರ್ಗ' ಸಿನಿಮಾದ ಮುಹೂರ್ತದಲ್ಲಿ ಭಾಗವಹಿಸಿದ್ದ ನಟ ಚೇತನ್, ನಾನು ಅಮೆರಿಕದಲ್ಲಿ ಇದ್ದಾಗ ಕೂಡಾ ಎಸ್ಪಿಬಿ ಅವರ ಹಾಡುಗಳನ್ನು ಕೇಳುತ್ತಿದ್ದೆ. ಅವರು ಇತರ ಭಾಷೆಗಳಲ್ಲಿ ಹಾಡಿರುವ ಹಾಡುಗಳನ್ನು ಕೂಡಾ ಕೇಳಿದ್ದೇನೆ. ಅವರು ಗುಣಮುಖರಾಗಿ ಬಂದು ಮತ್ತಷ್ಟು ಹಾಡುಗಳನ್ನು ಹಾಡಲಿ ಎಂದು ಚೇತನ್ ಹಾರೈಸಿದ್ದಾರೆ.
ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಎಸ್ಪಿಬಿ ಕೋವಿಡ್-19 ಗಾಗಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ನುರಿತ ವಿದೇಶಿ ವೈದ್ಯರೊಂದಿಗೆ ಚಿಕಿತ್ಸೆ ಮುಂದುವರೆಸಿದ್ದೇವೆ ಎಂದು ವೈದ್ಯರು ನಿನ್ನೆ ಮಾಹಿತಿ ನೀಡಿದ್ದರು.