ನ್ಯಾಯಾಂಗ ನಿಂದನೆ ಆರೋಪದಡಿ ಶೇಷಾದ್ರಿಪುರಂ ಠಾಣೆ ಪೊಲೀಸರು ನಟ, ಸಾಮಾಜಿಕ ಹೋರಾಟಗಾರ ಚೇತನ್ ಅವರನ್ನ ಬಂಧಿಸಿದ್ದಾರೆ.
ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದ ತೀರ್ಪನ್ನ ಪ್ರಶ್ನಿಸಿ, ನಟ ಚೇತನ್ 2 ವರ್ಷಗಳ ಹಿಂದೆ ಟ್ಟೀಟ್ ಮಾಡಿದ್ದರು. ಈಗ ಹಿಜಾಬ್ ಅರ್ಜಿ ವಿಚಾರಣೆ ನಡೆಸುತ್ತಿರುವ ಅದೇ ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ಟ್ಟೀಟ್ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದರು.
ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಟ್ಟೀಟ್ ಆರೋಪದಡಿ ನಟ ಚೇತನ್‌ರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ನಗರ ಕೇಂದ್ರ ವಿಭಾಗದ ಡಿಸಿಪಿ ಎಮ್ ಎನ್ ಅನುಚೇತ್ ಖಚಿತಪಡಿಸಿದ್ದಾರೆ.
ಈ ಬಗ್ಗೆ ನಟ ಚೇತನ್ ಪತ್ನಿ ಮೇಘಾ ಪ್ರತಿಕ್ರಿಯಿಸಿದ್ದು, ಪೊಲೀಸರು ಯಾವುದೇ ನೋಟಿಸ್ ನೀಡದೆ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆ ಎದುರು ಫೇಸ್‌ಬುಕ್ ಲೈವ್‌ನಲ್ಲಿ ಆತಂಕ ವ್ಯಕ್ತಪಡಿಸಿರುವ ಮೇಘಾ, ಇಂದು ಮಧ್ಯಾಹ್ನ 3 ಗಂಟೆಯಿಂದ ನನ್ನ ಪತಿ ಚೇತನ್ ಕಾಣುತ್ತಿಲ್ಲ ಎಂದಿದ್ದರು.
ಚೇತನ್ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಅವರ ಗನ್‌ಮ್ಯಾನ್ ಫೋನ್‌ಗೆ ಕೂಡ ಸಿಗುತ್ತಿಲ್ಲ. ಇದು ಪೊಲೀಸರು ಮಾಡಿರುವ ಅಪಹರಣವಾಗಿದೆ. ಈ ದೇಶದ ಯಾವುದೇ ಪ್ರಜೆಯನ್ನು ವಿಚಾರಣೆಗಾಗಿ ಕರೆದೊಯ್ಯಬೇಕಾದರೆ ಅವರ ಕುಟುಂಬ ಸದಸ್ಯರಿಗೆ ತಿಳಿಸಬೇಕು. ಮೊದಲೇ ನೋಟಿಸ್ ನೀಡಬೇಕು ಎಂದು ಮೇಘಾ ಅವರು ಕಸಿವಿಸಿಗೊಂಡಿದ್ದರು.
ಅವರಿಗೆ ನ್ಯಾಯಾಂಗದ ಸಹಾಯ ಪಡೆಯುವ ಹಕ್ಕು ಇದೆ. ಇದನ್ನು ಉಲ್ಲಂಘಿಸಿರುವ ಪೊಲೀಸರು ಉದ್ದೇಶಪೂರ್ವಕವಾಗಿ ಚೇತನ್‌ಗೆ ಕಿರುಕುಳ ನೀಡುತ್ತಿದ್ದಾರೆ. ಇದು ಸರಿಯಾದ ಮಾರ್ಗವಲ್ಲ ಎಂದು ದಲಿತ ಪರ ಸಂಘಟನೆಗಳು ಆರೋಪಿಸಿವೆ.