ಬೆಂಗಳೂರು: ಕೃಷಿ ಸಚಿವ ಬಿ. ಸಿ ಪಾಟೀಲ್ ಅವರು ಆರಂಭಿಸಿರುವ 'ರೈತರೊಂದಿಗೆ ಒಂದು ದಿನ ಕಾರ್ಯಕ್ರಮ' ದಲ್ಲಿ ಕನ್ನಡದ ಸ್ಟಾರ್ ನಟ ದರ್ಶನ್ ಭಾಗಿಯಾಗಲಿದ್ದಾರೆ. ನವೆಂಬರ್ 14 ರಂದು ಹಿರೇಕೆರೂರಿನಲ್ಲಿ ನಡೆಯುವ ರೈತರೊಂದಿಗಿನ ಕಾರ್ಯಕ್ರಮದಲ್ಲಿ ಅವರು ಕಾಲ ಕಳೆಯಲಿದ್ದಾರೆ.
ಈ ಹಿಂದೆ ರಾಜ್ಯ ಸರ್ಕಾರ ನಟ ದರ್ಶನ್ ಅವರನ್ನು ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕ ಮಾಡಿತ್ತು. ಈ ಕೆಲಸಕ್ಕೆ ಸರ್ಕಾರದಿಂದ ಯಾವುದೇ ಸಂಭಾವನೆ ಪಡೆಯದೆ, ಇಷ್ಟ ಪಟ್ಟು ಕೃಷಿ ಇಲಾಖೆಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ ಅಂತಾ ಹಿಂದೆಯೇ ಹೇಳಲಾಗಿತ್ತು. ಕಳೆದ ವರ್ಷ (2020 ರ ನವೆಂಬರ್ 14) ರಂದು ಮಂಡ್ಯ ಜಿಲ್ಲೆಯ ಮದವಿನ ಕೋಡಿ ಗ್ರಾಮದಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮವನ್ನು ಬಿ. ಸಿ ಪಾಟೀಲ್ ಆರಂಭಿಸಿದ್ದರು. ರೈತರ ಸಮಸ್ಯೆಗಳನ್ನು ಅರಿತು ಪರಿಹಾರ ಕಂಡುಕೊಳ್ಳುವುದು, ಯಶಸ್ವಿ ರೈತರನ್ನು ಆಹ್ವಾನಿಸಿ ಅವರಿಂದ ಉತ್ತಮ ಕೃಷಿ ಪದ್ಧತಿಗಳ ಕುರಿತು ಇತರೆ ರೈತರಿಗೆ ಉಪನ್ಯಾಸ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಕೃಷಿಯಲ್ಲಿ ತೊಡಗಿಕೊಂಡಿರುವ ದರ್ಶನ್, ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳಲ್ಲಿ ಭಾಗಿಯಾಗಲಿದ್ದಾರೆ. ಹಾಗೆಯೇ, ರೈತರು ಮತ್ತು ಸರ್ಕಾರದ ನಡುವಿನ ಅಂತರವನ್ನು ಕಡಿಮೆ ಮಾಡಲು ದರ್ಶನ್ ಸೇತುವೆಯಾಗಿ ಕೆಲಸ ಮಾಡಲಿದ್ದಾರೆ.
ಈ ಹಿಂದೆ ಅರಣ್ಯ ಇಲಾಖೆಯ ರಾಯಭಾರಿಯಾಗಿದ್ದ ದರ್ಶನ್, ಕೊರೊನಾದಿಂದ ತತ್ತರಿಸಿ ಹೋಗಿದ್ದ ರಾಜ್ಯದ ಮೃಗಾಲಯಗಳ ಪ್ರಾಣಿಗಳನ್ನ ದತ್ತು ಪಡೆದು ಪ್ರಾಣಿ ಸಂಕುಲವನ್ನ ಉಳಿಸಿ ಎಂದು ಮನವಿ ಮಾಡಿದ್ದರು. ಆಗ ಅವರ ಮಾತಿಗೆ ರಾಜ್ಯದೆಲ್ಲೆಡೆ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿತ್ತು. ಈಗ ಕೃಷಿ ಇಲಾಖೆಯ ರಾಯಬಾರಿಯಾಗಿರುವ ದರ್ಶನ್ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಕಾಲ ಕಳೆಯಲಿದ್ದಾರೆ. ಇದು ಯಾವ ಮಟ್ಟಿಗೆ ಜನರಿಂದ ಪ್ರತಿಕ್ರಿಯೆ ಸಿಗಲಿದೆ ಕಾದು ನೋಡಬೇಕಿದೆ.
ಓದಿ: ರವಿಚಂದ್ರನ್ ಮತ್ತು ಉಪ್ಪಿ ನಟನೆಯ 'ತ್ರಿಶೂಲಂ' ಸಿನಿಮಾ ಚಿತ್ರೀಕರಣಕ್ಕೆ ಅಡ್ಡಿ