ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾ ವಲ್ಲಭ ಧಾರಾವಾಹಿಯಲ್ಲಿ ನಾಯಕನ ತಮ್ಮ ರಿಷಿಯಾಗಿ ಅಭಿನಯಿಸುತ್ತಿರುವ ದರ್ಶ್ ಚಂದ್ರಪ್ಪ ಸದ್ಯ ನಟನಾ ಲೋಕದಲ್ಲಿ ಬ್ಯುಸಿ. ಮಾಡೆಲಿಂಗ್ನ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ದರ್ಶ್ ಚಂದ್ರಪ್ಪ ಎಂಸಿಎ ಪದವೀಧರ. ದುರ್ಗಾ ಧಾರಾವಾಹಿಯ ನಕುಲ್ ಆಗಿ ಮನೆ ಮಾತಾಗಿರುವ ದರ್ಶ್ ಕಿರುತೆರೆ ಪ್ರಿಯರ ಪಾಲಿನ ಚಾಕೋಲೆಟ್ ಬಾಯ್.


ಅಪ್ಪ ಅಮ್ಮನಿಗೆ ಮಗ ಬಣ್ಣದ ಲೋಕಕ್ಕೆ ಬರುವುದು ಕಿಂಚಿತ್ತೂ ಇಷ್ಟವಿರಲಿಲ್ಲ. ಯಾಕೆಂದರೆ ನಟನೆ ಕೇವಲ ಸ್ವಲ್ಪ ದಿನಗಳಿಗೆ ಮಾತ್ರ ಸೀಮಿತ. ಸರಿಯಾದ ವಿದ್ಯಾಭ್ಯಾಸ ಮಾಡಿದರೆ ಒಳ್ಳೆಯ ಕೆಲಸ ಸಿಗಬಹುದು ಎಂಬುದು ಅವರ ಭಾವನೆ. ಗೆಳೆಯರ ಸಲಹೆಯ ಮೇರೆಗೆ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟ ದರ್ಶ್ ಪ್ರತಿಷ್ಠಿತ ಬ್ರ್ಯಾಂಡ್ ಹಣೆಪಟ್ಟಿಯುಳ್ಳ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಮಾತ್ರವಲ್ಲ ದೇಶದೆಲ್ಲೆಡೆ ಶೋ ನಡೆಸಿದ್ದಾರೆ.


ತ್ರೀ ರೋಸಸ್ ಸಿನಿಮಾದಲ್ಲಿ ನಾಯಕನಾಗಿ ನಟಿಸಿರುವ ದರ್ಶ್ ಮೊದಲ ಬಾರಿ ಕಿರುತೆರೆಗೆ ಕಾಲಿಟ್ಟಿದ್ದು ದುರ್ಗಾ ಧಾರಾವಾಹಿಯ ಮೂಲಕ. ಇದೀಗ ಸೀತಾವಲ್ಲಭ ಧಾರಾವಾಹಿಯಲ್ಲಿ ರಿಷಿ ಯಾಗಿ ಬ್ಯುಸಿಯಾಗಿರುವ ದರ್ಶ್ ನಟನಾಗಿ ಮಿಂಚಬೇಕಾದರೆ ಸಾಕಷ್ಟು ಪರಿಶ್ರಮ ಅಗತ್ಯವಿದೆ ಎನ್ನುತ್ತಾರೆ.


ನಟನಾ ಲೋಕಕ್ಕೆ ಬಂದ ನಂತರ ತಾಳ್ಮೆ, ಏಕಾಗ್ರತೆಯನ್ನು ಕಲಿತೆ ಎಂದು ಹೇಳುವ ದರ್ಶ್ ಅವರ ಆತ್ಮವಿಶ್ವಾಸವನ್ನು ಕೂಡಾ ಇದೇ ನಟನೆ ಹೆಚ್ಚಿಸಿದೆಯಂತೆ. ಟಿವಿ ಧಾರಾವಾಹಿಗಿಂತ ಸಿನಿಮಾದಲ್ಲಿ ಮುಂದುವರಿಯುವುದೇ ನನ್ನ ಆಸೆ ಎನ್ನುತ್ತಾರೆ ದರ್ಶ್.