ಭಾರತದ ಮೊದಲ ಮಹಿಳಾ ಪ್ರಧಾನ ಸೂಪರ್ ಹೀರೋ ಕಾನ್ಸೆಪ್ಟ್ ಇಟ್ಟುಕೊಂಡು ಕನ್ನಡ ಚಿತ್ರರಂಗದಲ್ಲಿ ಬರುತ್ತಿರುವ ಸಿನಿಮಾ ಆನ. ಅದಿತಿ ಪ್ರಭುದೇವ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಆನ ಚಿತ್ರದ ಟೀಸರ್ ಬಿಡುಗಡೆ ಆಗಿ, ಆನಂದ್ ಆಡಿಯೋ ಯೂಟ್ಯೂಬ್ನಲ್ಲಿ ಮಿಲಿಯನ್ ಗಟ್ಟಲೆ ಜನ ನೋಡುತ್ತಿದ್ದಾರೆ. ಸದ್ಯ ಟೀಸರ್ನಿಂದಲೇ ಆನ ಚಿತ್ರಕ್ಕೆ ತೆಲುಗು ಹಾಗು ಹಿಂದಿಯ ಪ್ರತಿಷ್ಠಿತ ಸಂಸ್ಥೆಗಳು ಡಬ್ಬಿಂಗ್ ರೈಟ್ಸ್ ಅನ್ನು ಕೇಳುತ್ತಿದ್ದಾರಂತೆ.
ಈ ಸಂತೋಷವನ್ನ ಹಂಚಿಕೊಳ್ಳೊದಕ್ಕೆ ಯುವ ನಿರ್ದೇಶಕ ಮನೋಜ್ ಪಿ ನಡುಲುಮನೆ, ನಟಿ ಅದಿತಿ ಪ್ರಭುದೇವ, ನಟ ಚೇತನ್ ಗಂಧರ್ವ, ಹಾಸ್ಯ ನಟ ಶಿವಮಂಜು, ಸುನೀಲ್ ಪುರಾಣಿಕ್ ಸೇರಿದಂತೆ ಇಡೀ ಆನ ಚಿತ್ರತಂಡ ಮಾಧ್ಯಮದ ಮುಂದೆ ಬಂದಿತ್ತು.
ಅದಿತಿ ಪ್ರಭುದೇವ ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನ ಪಾತ್ರ ನಿರ್ವಹಣೆ ಮಾಡಿದ್ದಾರೆ. ಇನ್ನು ಚೇತನ್ ಗಂಧರ್ವ ಈ ಚಿತ್ರದಲ್ಲಿ ಅಘೋರಿಯ ಪಾತ್ರವನ್ನ ಮಾಡಿದ್ದಾರಂತೆ. ಇದರ ಜೊತೆಗೆ ಸುನೀಲ್ ಪುರಾಣಿಕ್, ರನ್ವಿತ್ ಶಿವಕುಮಾರ್, ವಿಕಾಶ್ ಉತ್ತಯ್ಯ, ಪ್ರೇರಣ ಕಂಬಂಮ್, ವರುಣ್ ಅಮರವಾತಿ, ಸಮರ್ಥ್ ನರಸಿಂಹರಾಜು, ಕಾರ್ತಿಕ್ ನಾಗಾರಾಜನ್, ಶಿವಮಂಜು ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.
ಇದನ್ನು ಓದಿ: ಯುವರತ್ನ ಸಿನಿಮಾ ರಿಲೀಸ್ಗಿಲ್ಲ ಅಡೆತಡೆ: ನಿಟ್ಟುಸಿರು ಬಿಟ್ಟ ಚಿತ್ರತಂಡ
ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಮನೋಜ್ ಪಿ ನಡುಲುಮನೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಹಲವು ಕಿರು ಹಾಗೂ ಟೆಲಿ ಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ಮನೋಜ್ ಅವರಿಗೆ ಹಿರಿತೆರೆಯಲ್ಲಿ ಇದು ಮೊದಲ ನಿರ್ದೇಶನದ ಚಿತ್ರ. ಯುಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾ ವಸಂತಕುಮಾರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ ನಿರ್ದೇಶನವಿರುವ ಆನಗೆ ವಿಜೇತ್ ಚಂದ್ರ ಅವರ ಸಂಕಲನವಿದೆ.
ಸದ್ಯ ಟೀಸರ್ನಿಂದ ಗಮನ ಸೆಳೆಯುತ್ತಿರೋ ಆನ ಚಿತ್ರಕ್ಕೆ, ರಿಲೀಸ್ ಗೂ ಮುಂಚೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆಯಂತೆ. ಇನ್ನು ನಿರ್ದೇಶಕ ಮನೋಜ್ ಹೇಳುವ ಹಾಗೇ ಆನ ಸಿನಿಮಾದ ಸಿಕ್ವೇಲ್ ಕೂಡ ಬರಲಿದೆ. ಮೊದಲು ಆನ ಚಿತ್ರ ತೆರೆಗೆ ಬಂದ ಮೇಲೆ ಪಾರ್ಟ್ 2 ಬಗ್ಗೆ ಯೋಚನೆ ಮಾಡಲಿದೆಯಂತೆ ಚಿತ್ರತಂಡ.