ಆಸ್ಕರ್ ಅವಾರ್ಡ್ ಪುರಸ್ಕೃತ ಎ.ಆರ್.ರೆಹಮಾನ್ ವೃತ್ತಿ ಆರಂಭಿಸಿದ್ದು ಬೆಂಗಳೂರಿನಲ್ಲಿ ಎಂಬುದು ಎಲ್ಲರಿಗೂ ತಿಳಿದ ವಿಷಯ. ಅವರು ಅನೇಕ ಬಾರಿ ಬೆಂಗಳೂರಿಗೆ ಬಂದಿದ್ದಾರೆ. ಮೊನ್ನೆಯಷ್ಟೇ ನವೀಕರಣಗೊಂಡ ಶಂಕರ್ ನಾಗ್ ಚಿತ್ರಮಂದಿರದ ಉದ್ಘಾಟನೆಗೆ ರೆಹಮಾನ್ ಆಗಮಿಸಿದ್ದರು.
ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ 'ಶಂಕರ್ ನಾಗ್' ಚಿತ್ರಮಂದಿರಕ್ಕೆ ಹೆಸರಾಂತ ಹರ್ಮನ್ ಕಂಪನಿಯ 'ಜೆಎಲ್ಬಿ' ಸೌಂಡ್ ಸ್ಪೀಕರ್ ಅಳವಡಿಸಿದೆ. ಇದನ್ನು ನೋಡಿದ ರೆಹಮಾನ್ ತಮ್ಮ ಜೀವನದ ಕಷ್ಟದ ದಿನಗಳನ್ನು ನೆನೆದರು.
ಒಂದು ಕಾಲದಲ್ಲಿ ಜೆಎಲ್ಬಿ ಸ್ಪೀಕರ್, ಹೆಡ್ ಫೋನ್ ಇವರಿಗೆ ಹುಚ್ಚು ಹಿಡಿಸಿದನ್ನು ಹೇಳಿಕೊಂಡ ಸಂಗೀತ ಮಾಂತ್ರಿಕ, ಅದನ್ನು ಕೊಳ್ಳಲು ನನ್ನ ಜೇಬಿನಲ್ಲಿ ಹಣ ಇರಲಿಲ್ಲ. ಐದು ತಿಂಗಳು ಹಣ ಕೂಡಿಹಾಕಿ ಆ ಸ್ಪೀಕರ್ ಖರೀದಿಸಿದ್ದೆ ಎಂದರು.
ಅಂದು ಒಂದು ಇಯರ್ಪೋನ್ ಕೊಂಡುಕೊಳ್ಳಲು ಪರದಾಡಿದ್ದ ರೆಹಮಾನ್, ಇಂದು ಅದೇ 'ಜೆಎಲ್ಬಿ' ಹರ್ಮನ್ ಕಂಪನಿಯ ಭಾರತದ ರಾಯಭಾರಿ ಆಗಿದ್ದಾರೆ. ಅದಕ್ಕೇ ಹೇಳೋದು ಕಾಲಾಯ ತಸ್ಮೈ ನಮಃ!
ಎ.ಆರ್.ರೆಹಮಾನ್ ಅವರ ಬೆಳವಣಿಗೆ ಇಡೀ ವಿಶ್ವವೆ ಇಂದು ಮೆಚ್ಚುವಂತಹುದು. ಇವರು ಆಸ್ಕರ್ ಪ್ರಶಸ್ತಿ ವಿಜೇತ, ಭಾರತೀಯ ಚಿತ್ರ ರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಸಂಗೀತ ನಿರ್ದೇಶಕ ಎಂಬ ಖ್ಯಾತಿಯಿದೆ.