ಇಂದು ಕನ್ನಡ ಚಿತ್ರರಂಗದ ಮುತ್ತು ಡಾ. ರಾಜ್ಕುಮಾರ್ ಅವರ 92ನೇ ಹುಟ್ಟುಹಬ್ಬ. ಪ್ರತಿ ವರ್ಷ ಅಣ್ಣಾವ್ರ ಜನ್ಮದಿನವನ್ನು ಅಭಿಮಾನಿ ದೇವರುಗಳೇ ಉತ್ಸವದ ರೀತಿ ಆಚರಿಸುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಭೀತಿಯಿಂದ ಅಭಿಮಾನಿಗಳು ಸೇರಿರಲಿಲ್ಲ.
ರಾಜ್ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಇಂದು ಪುತ್ರ ಶಿವರಾಜ್ ಕುಮಾರ್ ಕಂಠೀರವ ಸ್ಟುಡಿಯೋದಲ್ಲಿರುವ ತಂದೆ ಸಮಾಧಿಗೆ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಶಿವಣ್ಣ, ಕೊರೊನಾ ಸಮಯದಲ್ಲಿ ಅಪ್ಪಾಜಿ ಜನ್ಮದಿನ ಬಂದಿದೆ. ಇಂತಹ ಸಂದರ್ಭದಲ್ಲಿ ಎಲ್ಲವನ್ನೂ ಎದುರಿಸಬೇಕು. ಲಾಕ್ಡೌನ್ ನಿಯಮಗಳನ್ನೂ ಪಾಲಿಸಲೇಬೇಕು. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಇದು ಅವಶ್ಯಕವಾಗಿದೆ ಎಂದರು.
ಈ ತಿಂಗಳಲ್ಲಿ ಜನ್ಮದಿನ ಆಚರಿಸಲು ಸಾಧ್ಯವಾಗದಿದ್ದರೆ, ಮೇ ಅಥವಾ ಜೂನ್ ತಿಂಗಳಲ್ಲಿ ಆಚರಿಸಬಹುದು. ಅಭಿಮಾನಿಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಮನೆ ಬಿಟ್ಟು ಹೊರಬರಬೇಡಿ. ಲಾಕ್ಡೌನ್ ಸಮಯದಲ್ಲಿ ಮನೆಯಲ್ಲೇ ಇದ್ದೇನೆ. ಸಿನಿಮಾ ನೋಡುತ್ತೇನೆ. ಎರಡೂ ಹೊತ್ತು ವರ್ಕೌಟ್ ಮಾಡುತ್ತೇನೆ ಎಂದು ತಿಳಿಸಿದರು.
ಅಣ್ಣಾವ್ರ ಜನ್ಮದಿನದಂದು ಯುವರಾಜ್ ಕುಮಾರ್ ಮೊದಲ ಸಿನಿಮಾದ ಫೋಸ್ಟರ್ ಬಿಡುಗಡೆಯಾಗಿದೆ. ಯುವರಾಜ್ ಕುಮಾರ್ ಕೂಡ ನನ್ನ ಮಗನೇ. ನನ್ನನ್ನು ನೋಡಿಯೇ ಆತ ಬೆಳೆದಿದ್ದಾನೆ. ಪೂರ್ಣಿಮಾ-ನಟ ರಾಮ್‌ಕುಮಾರ್ ಪುತ್ರ ಧೀರೇನ್ ಕೂಡ ಚಿತ್ರರಂಗ ಪ್ರವೇಶಿಸುತ್ತಿದ್ದಾನೆ. ಅವನೂ ಕೂಡ ಪ್ರಾಮಿಸಿಂಗ್ ಆ್ಯಕ್ಟರ್ ಎಂದು ದೊಡ್ಮನೆ ಕುಡಿಗಳ ಬಗ್ಗೆ ಭರವಸೆಯ ಮಾತುಗಳನ್ನಾಡಿದರು.