ಬೆಂಗಳೂರು: ಇಂದು ರೆಬೆಲ್ ಸ್ಟಾರ್ ದಿ. ಅಂಬರೀಶ್ ಅವರ 68ನೇ ಹುಟ್ಟುಹಬ್ಬದ ಪ್ರಯುಕ್ತ ಸುಮಲತಾ ಅಂಬರೀಶ್ ಮತ್ತು ಅಭಿಷೇಕ್ ಅಂಬರೀಶ್ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಹುಟ್ಟುಹಬ್ಬ ಆಚರಿಸಿದರು.
ಜನ್ಮದಿನದ ಅಂಗವಾಗಿ ಅಂಬಿ ಸಮಾಧಿಯನ್ನು ವಿವಿಧ ಹೂಗಳಿಂದ ಅಲಂಕರಿಸಿದ್ದು, ಅಂಬಿಗೆ ಇಷ್ಟವಾದ ಮಟನ್ ಖೈಮಾ, ಮಟನ್ ಬಿರಿಯಾನಿ ಹಾಗೂ ಚಿಕನ್ ಪದಾರ್ಥಗಳನ್ನು ಸಮಾಧಿ ಬಳಿ ಎಡೆ ಇಟ್ಟು ಸುಮಲತಾ ಹಾಗೂ ಅಭಿಷೇಕ್ ಪೂಜೆ ಸಲ್ಲಿಸಿದರು. ಅಭಿಷೇಕ್ ಅಭಿನಯದ ಎರಡನೇ ಚಿತ್ರ "ಬ್ಯಾಡ್ ಮ್ಯಾನರ್ಸ್" ಸಿನಿಮಾದ ಪೋಸ್ಟರನ್ನು ಅಂಬಿ ಫೋಟೊ ಬಳಿ ಇಟ್ಟು ಪೂಜೆ ಸಲ್ಲಿಸಿದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಕೊರೊನಾ ಹಿನ್ನೆಲೆ ಅಭಿಮಾನಿಗಳು ಸಮಾಧಿ ಬಳಿ ಬರುವುದಕ್ಕೆ ನಿರ್ಬಂಧ ಹಾಕಿರುವ ಕಾರಣ ಬಂದಿಲ್ಲ. ಅಭಿಮಾನಿಗಳು ಯಾವಾಗಲೂ ನಮ್ಮ ಮನದಲ್ಲಿ ಇರುತ್ತಾರೆ. ನಿನ್ನೆ ರಾತ್ರಿ ಅಭಿಮಾನಿಗಳು ಮನೆ ಬಳಿ ಬಂದು ಜೈಕಾರ ಹಾಕಿದ್ರು ಎಂದರು.
ಅಂಬರೀಶ್ ಹುಟ್ಟುಹಬ್ಬದ ದಿನವೇ ಅಭಿ ಸಿನಿಮಾದ ಫಸ್ಟ್ ಲುಕ್ ಲಾಂಚ್ ಆಗಿದ್ದು ಸಂತೋಷ ತಂದಿದೆ. 'ಬ್ಯಾಡ್ ಮ್ಯಾನರ್ಸ್' ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇದೆ. ಮೊದಲ ಸಿನಿಮಾ ಲವ್ ಸ್ಟೋರಿ ಆಗಿತ್ತು, ಈಗ ಮಾಸ್ ಲುಕ್ನಲ್ಲಿ ಅಭಿ ಬರ್ತಿದ್ದಾನೆ. ಅಲ್ಲದೆ ಅನುಭವಿ ನಿರ್ದೇಶಕ ಸೂರಿ ಜೊತೆ ಸಿನಿಮಾ ಮಾಡುತ್ತಿರುವುದು ಅವನ ಅದೃಷ್ಟ. ಜೊತೆಗೆ ಎಲ್ಲರೂ ಕೊರೊನಾ ಸೋಂಕಿನಿಂದ ದೂರ ಇರಲು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳಬೇಕು ಎಂದು ಜನರಲ್ಲಿ ಮನವಿ ಮಾಡಿದರು.
ಅಂಬಿ ಹುಟ್ಟುಹಬ್ಬ ಆಚರಣೆಗೆ ಸಚಿವ ಗೋಪಾಲಯ್ಯ ಸಹ ಆಗಮಿಸಿ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದರು. ಈ ವೇಳೆ ನಟ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಉಪಸ್ಥಿತರಿದ್ದರು.