ನವೆಂಬರ್ 1 ಕನ್ನಡ ರಾಜ್ಯೋತ್ಸವದಂದು ಬರೋಬ್ಬರಿ ಅರ್ಧ ಡಜನ್ ಕನ್ನಡ ಚಿತ್ರಗಳು ತೆರೆಕಾಣಲು ಸಜ್ಜಾಗಿವೆ. ಈ ಶುಕ್ರವಾರ 'ಅಂದವಾದ', 'ಮೂರ್ಕಲ್ ಎಸ್ಟೇಟ್' ಜೊತೆಗೆ 'ಅದೃಷ್ಟ 1 4 3' ಕನ್ನಡ ಸಿನಿಮಾ ಬಿಡುಗಡೆಯಾಗಲಿದೆ.
ಮೂರ್ಕಲ್ ಎಸ್ಟೇಟ್ ಸೆನ್ಸಾರ್ ಮಂಡಳಿಯನ್ನೇ ಬೆಚ್ಚಿ ಬೀಳಿಸಿದ ಚಿತ್ರ. ಕೇವಲ ಸೌಂಡ್ ರೆಕಾರ್ಡಿಂಗ್ ವಿಚಾರಕ್ಕೆನೇ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಎ’ ಅರ್ಹತಾ ಪತ್ರ ನೀಡಿದೆ. ಈ ಸಿನಿಮಾ ಪ್ರಾದೇಶಿಕ ಮಂಡಳಿಯಿಂದ ಪರಿಷ್ಕರಣಾ ಸಮಿತಿ ತಲುಪಿ ‘ಎ’ ಅರ್ಹತಾ ಪತ್ರದೊಂದಿಗೆ ವಾಪಸ್ಸಾಗಿದೆ.
ಎಲ್ಲರ ಜೀವನದಲ್ಲೂ ಧನಾತ್ಮಕ, ಋಣಾತ್ಮಕ ಸಂದರ್ಭಗಳು ಬರುತ್ತವೆ. ಆಗ ಋಣಾತ್ಮಕ ಸಂದರ್ಭಗಳಲ್ಲಿನ ಅಂಶಗಳನ್ನು ಕೆದಕಲು ಹೋಗಬಾರದು. ಅದರಿಂದ ತೊಂದರೆಯೇ ಹೆಚ್ಚು ಎಂದು ಮೋದ್ ಕುಮಾರ್ ನಿರ್ದೇಶನದ ಚಿತ್ರ 'ಮೂರ್ಕಲ್ ಎಸ್ಟೇಟ್' ಹೇಳಲಿದೆ. 600 ಎಕರೆಯ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ ಈ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಕುಮಾರ್ ಎಸ್. ಭದ್ರಾವತಿ ನಿರ್ಮಾಪಕರಾಗಿದ್ದಾರೆ. ಪ್ರವೀಣ್ ಹಾಗೂ ಪ್ರಕೃತಿ ತಾರಾಗಣದ ಈ ಚಿತ್ರಕ್ಕೆ ಸುದ್ದೋ ರಾಯ್ ಸಂಗೀತ ಒದಗಿಸಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣವಿದೆ.
'ಅಂದವಾದ' ಇದು ಪ್ರೇಮಕತೆಯ ಜೊತೆಗೆ ವಿಭಿನ್ನ ಶೈಲಿಯ ಸಿನಿಮಾ. ನಾಯಕಿಯ ಹಿಂದೆಬಿದ್ದ ನಾಯಕ ಇನ್ನಿಲ್ಲದ ಮಾನಸಿಕ ವೇದನೆ ಅನುಭವಿಸುತ್ತಾನೆ. ನಾಯಕಿಯ ಪ್ರೇಮ ನಿವೇದನೆಯನ್ನೇ ಕಾಯುತ್ತಿರುವ ನಾಯಕ ತನ್ನ ಜೀವನವನ್ನು ಹೇಗೆ ರೂಪಿಸಿಕೊಳ್ಳುತ್ತಾನೆ ಎಂಬುದೇ ಈ ಸಿನಿಮಾದ ತಿರುಳು. ಮಧುಶ್ರೀ ಗೋಲ್ಡ್ ಫ್ರೇಮ್ ಅಡಿಯಲ್ಲಿ ಡಿ. ಆರ್. ಮಧು ಜಿ. ರಾಜ್ ನಿರ್ಮಾಣದ ಈ ಸಿನಿಮಾದಲ್ಲಿ ಮಳೆಯೂ ಕೂಡ ಮುಖ್ಯ ಪಾತ್ರವಹಿಸಿದೆ. ಚಿತ್ರಕಥೆಯ ಜೊತೆ ನಿರ್ದೇಶನವನ್ನೂ ಮಾಡಿದ್ದಾರೆ ಪ್ರತಿಭಾವಂತ ನಿರ್ದೇಶಕ ಚಲ. ಗುರುಕಿರಣ್ ಹಿನ್ನಲೆ ಸಂಗೀತ, ಹರೀಶ್ ಎನ್ ಸೊಂಡೆಕೊಪ್ಪ ಛಾಯಾಗ್ರಹಣ, ಅರ್ಜುನ್ ಕಿತ್ತು ಸಂಕಲನ ಮಾಡಿದ್ದಾರೆ. ಜಯಂತ್ ಕಾಯ್ಕಿಣಿ, ಯೋಗರಾಜ ಭಟ್, ಹೃದಯ ಶಿವ ಗೀತೆಗಳನ್ನು ರಚಿಸಿದ್ದಾರೆ.
ಜೈ, ಅನುಷ ರಂಗನಾಥ್, ಹರೀಶ್ ರಾಯ್, ಕೆ ಎಸ್ ಶ್ರೀಧರ್, ಕೆ ವಿ ಮಂಜಯ್ಯ, ರೇಖಾ ಸಾಗರ್, ರೋಜಾ ಹಾಗೂ ಇತರರು ತಾರಾಗಣದಲ್ಲಿದ್ದಾರೆ.
ಶುಕ್ರವಾರದ ಮತ್ತೊಂದು ಕನ್ನಡ ಚಿತ್ರ ‘ಅದೃಷ್ಟ 1 4 3’ – 1 4 3 ಅಂದರೆ ಐ ಲವ್ ಯು ಅಂತ ಅರ್ಥ. ಶ್ರೀವಿಷ್ಣು ಪಾದ ಮೂವಿ ಮೇಕರ್ಸ್ ಅಡಿಯಲ್ಲಿ ಕೆ.ಜ್ಯೋತಿ ನಿರ್ಮಾಣ ಮಾಡಿರುವ ಚಿತ್ರಕ್ಕೆ ಬಿ. ಪ್ರಭು ನಿರ್ದೇಶನವಿದೆ. ಪ್ರೇಮ್ ಛಾಯಾಗ್ರಹಣ, ವೈ ಸ್ಟೀಫನ್ ಸಂಗೀತ, ದಳಪತಿ ದಿನೇಶ್ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ.
ಯುವನ್, ಅಗ್ರಿಶ, ಕೆ ಜ್ಯೋತಿ, ಪ್ರಸನ್ನ, ಬಾಸ್ ಸುರೇಶ್, ಸಂತಾನ ಭಾರತಿ, ಪಿ.ಪಿ. ಗಜೇಂದ್ರ ತಾರಾಗಣ ಇರುವ ಈ ಚಿತ್ರ ತುಂಟಾಟ, ಹುಡುಗಾಟ, ಲವ್, ಸೆಂಟಿಮೆಂಟ್, ಕಾಮಿಡಿ ಅಂಶಗಳನ್ನು ಒಳಗೊಂಡಿದೆ.