ಕಳೆದ ವಾರ 9 ಕನ್ನಡ ಸಿನಿಮಾಗಳು ಬಿಡುಗಡೆಯಾಗಿದ್ದು ಯಾವ ಸಿನಿಮಾವನ್ನು ನೋಡುವುದು ಯಾವುದನ್ನು ಬಿಡುವುದು ಎಂದು ಪ್ರೇಕ್ಷಕರು ಗೊಂದಲದಲ್ಲಿಇರುವಾಗಲೇ ಈ ವಾರ ಮತ್ತೆ ಅದೇ ಪರಿಸ್ಥಿತಿ ಎದುರಾಗಿದೆ. ಈ ವಾರ 11 ಕನ್ನಡ ಸಿನಿಮಾಗಳು ತೆರೆ ಕಾಣುತ್ತಿವೆ. ಆದರೆ ಇಷ್ಟು ಕನ್ನಡ ಸಿನಿಮಾಗಳು ಒಟ್ಟಿಗೆ ಬಿಡುಗಡೆಯಾಗುತ್ತಿರುವುದಕ್ಕೆ ಆಕ್ಷೇಪ ಕೂಡಾ ಇದೆ.
ಕಳೆದ ವಾರ ಬಿಡುಗಡೆಯಾದ 9 ಸಿನಿಮಾಗಳಲ್ಲಿ 'ಜಂಟಲ್ ಮ್ಯಾನ್' , 'ಮಾಲ್ಗುಡಿ ಡೇಸ್' ಹಾಗೂ 'ದಿಯಾ' ಸಿನಿಮಾಗಳನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಆದರೆ ಉಳಿದ ಸಿನಿಮಾಗಳನ್ನು ಪ್ರೇಕ್ಷಕ ಕೈ ಬಿಟ್ಟಿದ್ದಾನೆ ಎಂದೇ ಹೇಳಬಹುದು. ಈ ವಿಚಾರ ತಿಳಿದೂ ಕೂಡಾ ನಿರ್ಮಾಪಕರು ನಾ ಮುಂದು ತಾ ಮುಂದು ಎನ್ನುವಂತೆ ಈ ಶುಕ್ರವಾರ ಕೂಡಾ ಥಿಯೇಟರ್ಗೆ ಲಗ್ಗೆ ಇಡುತ್ತಿದ್ದಾರೆ. ಆದರೆ ಎಲ್ಲಾ ಸಿನಿಮಾಗಳನ್ನು ಪ್ರೇಕ್ಷಕ ಒಟ್ಟಿಗೆ ನೋಡಲು ಸಾಧ್ಯವಿಲ್ಲ ಎಂಬ ವಿಚಾರ ನಿರ್ಮಾಪಕರಿಗೆ ತಿಳಿದಿದ್ದರೂ ಕೂಡಾ ಏಕಕಾಲಕ್ಕೆ ಇಷ್ಟು ಸಿನಿಮಾ ಬಿಡುಗಡೆ ಆಗುವ ಅವಶ್ಯಕತೆ ಏನಿದೆ ಎಂಬುದು ಸಿನಿಪಂಡಿತರ ಮಾತು. ಇದನ್ನೆಲ್ಲಾ ನೋಡಿದರೆ ಕನ್ನಡ ಚಿತ್ರರಂಗದಲ್ಲಿ ಸರಿಯಾದ ಮಾರ್ಗ ತೋರಿಸುವ ವ್ಯಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂಬುದು ಅರಿವಾಗುತ್ತಿದೆ. ಇನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡಾ ಈ ಬಗ್ಗೆ ಏನೂ ಮಾತನಾಡದೆ ಕೈ ಕಟ್ಟಿ ಕುಳಿತಿದೆ.
ಅಂದಹಾಗೆ ಈ ವಾರ ಸಾಗುತ ದೂರ ದೂರ, ಡೆಮೋ ಪೀಸ್, ನವರತ್ನ, ಬೆಂಕಿಯಲ್ಲಿ ಅರಳಿದ ಹೂವು, ಗಡ್ಡಪ್ಪನ ಸರ್ಕಲ್, ಗಿಫ್ಟ್ ಬಾಕ್ಸ್, ಸಾವು, ಲೈಟ್ ಆಗಿ ಲವ್ ಆಗಿದೆ, ತುಂಡ್ ಹೈಕ್ಲ ಸಾವಾಸ, ಪ್ರೇಮಾಸುರ ಹಾಗೂ ಪ್ರೀತಿಯೆಂದರೇನು ಸಿನಿಮಾಗಳು ತೆರೆಕಾಣುತ್ತಿವೆ. ಇದರಲ್ಲಿ ಪ್ರೇಕ್ಷಕ ಯಾವ ಸಿನಿಮಾ ಕೈ ಹಿಡಿಯುತ್ತಾನೆ ಎಂಬುದನ್ನು ಕಾದು ನೋಡಬೇಕು.