ಕಳೆದೊಂದು ದಶಕದಿಂದ ವಿದ್ಯಾ ಬಾಲನ್ ಸಿನಿಕ್ಷೇತ್ರದಲ್ಲಿ ದೊಡ್ಡವರೆನ್ನುವ ಯಾವ ಹೀರೋಗಳೊಂದಿಗೂ ನಟಿಸಿಲ್ಲ. 'ದಿ ಡರ್ಟಿ ಪಿಕ್ಚರ್' ಇರಬಹುದು, ಅಥವಾ ಕಹಾನಿ, ತುಮ್ಹಾರಿ ಸುಲು, ಶಕುಂತಲಾ.. ಹೀಗೆ ಯಾವುದೇ ಚಿತ್ರ ತೆಗೆದುಕೊಳ್ಳಿ. ಅಲ್ಲಿ ವಿದ್ಯಾ ಅವರೇ ಹೀರೋ, ಹೀರೋಯಿನ್ ಎಲ್ಲವೂ ಆಗಿರುತ್ತಾರೆ. ಈಗ 'ಶೇರ್ನಿ' ಚಿತ್ರದಲ್ಲೂ ಅದು ಮುಂದುವರೆದಿದೆ.
ಇಷ್ಟಕ್ಕೂ ವಿದ್ಯಾ ಬಾಲನ್ ಚಿತ್ರಗಳಲ್ಲಿ ದೊಡ್ಡ ಹೀರೋಗಳು ಯಾಕೆ ಇರುವುದಿಲ್ಲ?, ಈ ಹೀರೋಗಳ ಜತೆಗೆ ನಟಿಸುವುದರಿಂದ ತಾವು ಹೈಲೈಟ್ ಆಗುವುದಿಲ್ಲ ಎಂಬ ಭಯ ಏನಾದರೂ ವಿದ್ಯಾಗೆ ಕಾಡುತ್ತಿದೆಯೇ ಎಂಬ ಪ್ರಶ್ನೆ ಸಹಜ. ಈ ಪ್ರಶ್ನೆಯನ್ನು ಅವರ ಮುಂದಿಟ್ಟರೆ, ತಮಗೆ ಯಾವುದೇ ಭಯವಿಲ್ಲ, ಆದರೆ ಆ ಭಯ ಹೀರೋಗಳಿಗಿದೆ ಎನ್ನುತ್ತಾರೆ.
ನನ್ನ ಚಿತ್ರಗಳಿಗೆ ಹೀರೋಗಳನ್ನು ಹುಡುಕುವುದೇ ದೊಡ್ಡ ಸವಾಲು. ಏಕೆಂದರೆ, ಅವೆಲ್ಲಾ ಮಹಿಳಾ ಪ್ರಧಾನ ಚಿತ್ರಗಳಾಗಿರುತ್ತವೆ. ದೊಡ್ಡ ಹೀರೋಗಳ ಮಾತು ಹಾಗಿರಲಿ, ಹೊಸ ಹೀರೋಗಳು ಸಹ ನಟಿಸುವುದಕ್ಕೆ ಹಿಂದೇಟು ಹಾಕುತ್ತಾರೆ. ಎಲ್ಲವನ್ನೂ ವಿದ್ಯಾ ಮಾಡುವಾಗ, ಚಿತ್ರದಲ್ಲಿ ತಮಗೇನು ಕೆಲಸ? ಎಂದು ಅವರು ಮೂಗು ಮುರಿಯುತ್ತಾರೆ. ಹಾಗಾಗಿ, ಚಿತ್ರಗಳಲ್ಲಿ ದೊಡ್ಡ ಸ್ಟಾರ್ಗಳ್ಯಾರೂ ಇರುವುದಿಲ್ಲ. ಅದರಿಂದ ನನಗೆ ಹೆಚ್ಚು ವ್ಯತ್ಯಾಸವೇನೂ ಇಲ್ಲ. ಏಕೆಂದರೆ, ಅದು ಅವರಿಗೆ ನಷ್ಟವೇ ಹೊರತು, ನನಗಲ್ಲ ಎನ್ನುತ್ತಾರೆ ವಿದ್ಯಾ ಬಾಲನ್.