ಸುಶಾಂತ್ ಸಿಂಗ್ ರಜಪೂತ್ ಸಾವನ್ನಪಿದ ದಿನದಿಂದ ಇಂದಿನವರೆಗೆ ಬಾಲಿವುಡ್ನಲ್ಲಿ ಸ್ವಜನಪಕ್ಷಪಾತದ ಬಗ್ಗೆ ಒಬ್ಬರಾದರೂ ಮಾತನಾಡುತ್ತಿದ್ದಾರೆ. ಇದೀಗ ಕಿರುತೆರೆ ನಟಿ ಹಿನಾ ಖಾನ್ ಕೂಡಾ ಸುಶಾಂತ್ ಹಾಗೂ ಬಾಲಿವುಡ್ನಲ್ಲಿ ಸ್ವಜನಪಕ್ಷಪಾತದ ಬಗ್ಗೆ ಮಾತನಾಡಿದ್ದಾರೆ.
ಹಿನಾ ಖಾನ್ ಸುಮಾರು 8 ವರ್ಷಗಳ ಹಿಂದೆ 'ಯೆ ರಿಶ್ತಾ ಕ್ಯಾ ಕೆಹೆತಾ ಹೈ' ಧಾರಾವಾಹಿ ಮೂಲಕ ಕರಿಯರ್ ಆರಂಭಿಸಿ ತಮ್ಮ ಶ್ರಮದಿಂದ ಬಾಲಿವುಡ್ನಲ್ಲಿ ಒಂದು ಸ್ಥಾನ ಪಡೆದಿದ್ದಾರೆ. ಒಬ್ಬ ನಟ ಅಥವಾ ನಟಿ ಕಿರುತೆರೆಯಿಂದ ಕರಿಯರ್ ಆರಂಭಿಸಿ ಬಾಲಿವುಡ್ನಲ್ಲಿ ನೆಲೆ ನಿಲ್ಲುವುದು ಸುಲಭದ ವಿಚಾರವಲ್ಲ ಎಂದು ಹಿನಾ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ವಜನ ಪಕ್ಷಪಾತ ಚಿತ್ರರಂಗದಲ್ಲಿ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲಿ ಕೂಡಾ ಇದೆ. ನೀವು ಸ್ಟಾರ್ ಆಗಿದ್ದು ನಿಮ್ಮ ಮಕ್ಕಳನ್ನು ನೀವು ಸಿನಿಮಾರಂಗಕ್ಕೆ ಪರಿಚಯಸಬೇಕು ಎನ್ನುವುದು ಸರಿ. ಆದರೆ ಅದಕ್ಕಾಗಿ ಯಾವುದೇ ಹಿನ್ನೆಲೆ ಇಲ್ಲದೆ ಸಿನಿಮಾದಲ್ಲಿ ಹೆಸರು ಮಾಡುತ್ತಿರುವ ಪ್ರತಿಭೆಗಳ ಅವಕಾಶವನ್ನು ಕಸಿದುಕೊಳ್ಳುವುದು ಸರಿಯಲ್ಲ. ನಮಗೆ ದೊಡ್ಡ ಅವಕಾಶ ದೊರೆಯದೆ ಇರಬಹುದು. ಆದರೆ ನಮ್ಮನ್ನು ನಾವು ಏನೆಂದು ತೋರಿಸಿಕೊಳ್ಳುವುದಕ್ಕಾದರೂ ಒಂದು ಅವಕಾಶ ಕೊಡಿ ಎಂದು ಹಿನಾ ಖಾನ್ ಮನವಿ ಮಾಡಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಅವರ ಸಿನಿ ಜರ್ನಿ ನನಗೆ ಸ್ಪೂರ್ತಿ ನೀಡಿದೆ. ಭಾರತೀಯ ಚಿತ್ರರಂಗದಲ್ಲಿ ಅವರು ಒಂದು ಒಳ್ಳೆ ಸ್ಥಾನ ಪಡೆದಿದ್ದರು. ನಮಗೆ ಗಾಡ್ ಫಾದರ್ ಇಲ್ಲ. ನಮಗೆ ಸ್ವಲ್ಪವಾದರೂ ಗೌರವ ಹಾಗೂ ಗುರುತು ಸಿಕ್ಕರೆ ಸಾಕು ಎಂದು ಕಾಯುತ್ತಿರುತ್ತೇವೆ ಎಂದು ಬೇಸರದಿಂದ ಹಿನಾ ಹೇಳಿಕೊಂಡಿದ್ದಾರೆ.
ಕೇನ್ಸ್ ಫಿಲ್ಮ್ ಫೆಸ್ಟಿವಲ್ ವೇಳೆ ಭಾರತದ ಫ್ಯಾಷನ್ ಡಿಸೈನರ್ಗಳು ತಮ್ಮೊಂದಿಗೆ ನಡೆದುಕೊಂಡ ರೀತಿಯ ಬಗ್ಗೆ ಕೂಡಾ ಹಿನಾ ಮಾತನಾಡಿದ್ದಾರೆ. ಭಾರತದಲ್ಲಿ ಈ ರೀತಿ ಏಕೆ ಆಗುವುದೋ ನನಗೆ ಅರ್ಥವಾಗುತ್ತಿಲ್ಲ. ಕಿರುತೆರೆ ನಟರನ್ನು ಬಹಳ ಕೀಳಾಗಿ ನೋಡಲಾಗುತ್ತದೆ. ಕೇನ್ಸ್ ವೇಳೆ ಭಾರತೀಯ ಡಿಸೈನರ್ಗಳಿಗಿಂತ ಅಂತಾರಾಷ್ಟ್ರೀಯ ಡಿಸೈನರ್ಗಳು ನನಗೆ ಬಹಳ ಸಹಾಯ ಮಾಡಿದರು ಎಂದು ಹಿನಾ ನೆನಪಿಸಿಕೊಂಡಿದ್ದಾರೆ.
ಕಲಾವಿದರು ಎಂದರೆ ಅವರು ಕಲಾವಿದರೇ, ಅವರು ಸ್ಟಾರ್ ಮಕ್ಕಳಾ ಅಥವಾ ಹೊರಗಿನಿಂದ ಬಂದವರಾ ಎಂಬುದನ್ನು ಲೆಕ್ಕ ಮಾಡಬಾರದು. ನಮ್ಮ ಚಿತ್ರರಂಗದಲ್ಲಿ ಶೀಘ್ರವೇ ಬದಲಾವಣೆಗಳಾಗುತ್ತವೆ ಎಂಬ ನಂಬಿಕೆಯಿಂದ ಬದುಕುತ್ತಿದ್ದೇನೆ ಎಂದು ಹಿನಾ ಹೇಳುತ್ತಾರೆ.