ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಅನುಮಾನ ಸೃಷ್ಠಿಸುವಂತದ್ದು ಏನೂ ಕಂಡು ಬಂದಿಲ್ಲ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಸುಶಾಂತ್ ಬೆಳಗ್ಗೆ 6 ಗಂಟೆ ಸುಮಾರಿಗೆ ನಿದ್ದೆಯಿಂದ ಎದ್ದಿದ್ದರು ಎಂದು ತಿಳಿದು ಬಂದಿದೆ. ಬೆಳಗ್ಗೆ 9 ಗಂಟೆಗೆ ದಾಳಿಂಬೆ ರಸವನ್ನು ತಯಾರಿಸುವಂತೆ ಅಡುಗೆಯವರಿಗೆ ಹೇಳಿದರು. ಆ ಸಮಯದಲ್ಲಿ ಸುಶಾಂತ್ ಅವರ ಕ್ರಿಯೇಟಿವ್ ಮ್ಯಾನೇಜರ್, ಅಡುಗೆಯವರು ಮತ್ತು ಕೆಲಸದವರು ಮನೆಯಲ್ಲಿದ್ದರು. ಜ್ಯೂಸ್ ಕುಡಿದ ನಂತರ ಸುಶಾಂತ್ 10 ಗಂಟೆಗೆ ಬೆಡ್ ರೂಂಗೆ ಹೋಗಿ ಒಳಗಿನಿಂದ ಲಾಕ್ ಮಾಡಿಕೊಂಡಿದ್ದಾರೆ.
10 : 30ಕ್ಕೆ ಊಟಕ್ಕೆ ಏನು ತಯಾರಿಸಬೇಕೆಂದು ಕೇಳಲು ರೂಂ ಬಾಗಿಲು ತಟ್ಟಲಾಗಿದೆ. ಆದರೆ, ಒಳಗಿನಿಂದ ಯಾವುದೇ ರೆಸ್ಪಾನ್ಸ್ ಬಂದಿಲ್ಲ. ಸುಶಾಂತ್ ಮ್ಯಾನೇಜರ್ ಹೊರಗಿನಿಂದಲೇ ಕರೆ ಮಾಡಿದ್ದಾರೆ. ಫೋನ್ ಕರೆಗೂ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಕೂಡಲೇ ಸುಶಾಂತ್ ಸಹೋದರಿಗೆ ಕರೆ ಮಾಡಿದ ಮ್ಯಾನೇಜರ್ ನಡೆದ ಘಟನೆಯನ್ನೆಲ್ಲ ವಿವರಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಸುಶಾಂತ್ ಸಹೋದರಿ, ನಕಲಿ ಕೀ ಬಳೆಸಿ ರೂಂ ಬಾಗಿಲು ತೆರೆದಿದ್ದಾರೆ. ಆಗ ಸುಶಾಂತ್ ಫ್ಯಾನ್ಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಧ್ಯಾಹ್ನ 2:30ರ ಸುಮಾರಿಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸುಶಾಂತ್ ಹೈಪರ್ ಟೆನ್ಷನ್ ಮತ್ತು ತೀವ್ರ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಸುಶಾಂತ್ ಕೆಲವು ದಿನಗಳಿಂದ ಯಾವುದೇ ಔಷಧಿ ತೆಗೆದುಕೊಳ್ಳುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಸದ್ಯ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.