ದುನಿಯಾ ವಿಜಯ್ ಅಭಿನಯದ 'ಮಾಸ್ತಿ ಗುಡಿ' ಸಿನಿಮಾ ಚಿತ್ರೀಕರಣದ ವೇಳೆ ಸಂಭವಿಸಿದ ಅವಘಡ ನಿಮಗೆ ತಿಳಿದೇ ಇದೆ. ಅಂದು ನಡೆದ ದುರಂತ ಇನ್ನೂ ನನ್ನ ಜೀವನದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದಿದೆ ಎಂದು ಸ್ಟಂಟ್ ಮಾಸ್ಟರ್ ರವಿವರ್ಮಾ ಬೇಸರ ವ್ಯಕ್ತಪಡಿಸಿದರು.
ಕನ್ನಡ ಚಿತ್ರರಂಗ ಮಾತ್ರವಲ್ಲದೆ ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟರ ಸಿನಿಮಾಗಳಿಗೆ, ಸ್ಟಂಟ್ ಕೊರಿಯೋಗ್ರಾಫಿ ಮಾಡುತ್ತಿರುವ ಕನ್ನಡದ ಪ್ರತಿಭೆ ಡಾ. ರವಿವರ್ಮಾ ಸಹಾಯಕ ಅವರು ಇಂದು ಭಾರತೀಯ ಚಿತ್ರರಂಗದಲ್ಲಿಯೇ ಬೇಡಿಕೆಯ ಸಾಹಸ ನಿರ್ದೇಶಕರಾಗಿದ್ದಾರೆ.
ಕನ್ನಡದ ಪ್ರಖ್ಯಾತ ಸಾಹಸ ನಿರ್ದೇಶಕರಾಗಿದ್ದ ಕೆ.ಡಿ ವೆಂಕಟೇಶ್ ಅವರ ಗರಡಿಯಲ್ಲಿ ಸಹಾಯಕ ಫೈಟರ್ ಆಗಿದ್ದ ರವಿವರ್ಮಾ, ಸಾಕಷ್ಟು ಚಿತ್ರಗಳಲ್ಲಿ ಫೈಟರ್ ಆಗಿ ಕೆಲಸ ಮಾಡಿದ್ದಾರೆ. ದರ್ಶನ್ ಅಭಿನಯದ 'ಧರ್ಮ' ಸಿನಿಮಾದ ಬಳಿಕ ಪೂರ್ಣ ಪ್ರಮಾಣದ ಸ್ಟಂಟ್ ಮಾಸ್ಟರ್ ಆಗಿ ಕೆಲಸ ಮಾಡಿದ ಅವರು, ಇಲ್ಲಿವರೆಗೆ ಬರೋಬ್ಬರಿ 300 ಸಿನಿಮಾಗಳಿಗೆ ಸಾಹಸ ನಿರ್ದೇಶಕರಾಗಿದ್ದಾರೆ.
ಕನ್ನಡದ ಸ್ಟಾರ್ಗಳಾದ ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್, ದರ್ಶನ್, ಸುದೀಪ್ , ಯಶ್ ಸೇರಿದಂತೆ ಹೊಸ ಪ್ರತಿಭೆಗಳ ಸಿನಿಮಾಗಳಿಗೂ ರವಿವರ್ಮಾ ಸ್ಟಂಟ್ ಮಾಸ್ಟರ್ ಆಗಿ ಕೆಲಸ ಮಾಡಿದ್ದಾರೆ. ಶಿವರಾಜ್ ಕುಮಾರ್ 'ರುಸ್ತುಂ' ಸಿನಿಮಾವನ್ನು ನಿರ್ದೇಶನ ಮಾಡುವ ಮೂಲಕ ನಿರ್ದೇಶಕರಾಗಿ ಸಹ ಹೊರಹೊಮ್ಮಿದ್ದಾರೆ.
ಇನ್ನು ಬಾಲಿವುಡ್ನ ಸಲ್ಮಾನ್ ಖಾನ್, ಶಾರುಖ್ ಖಾನ್, ಅಜಯ್ ದೇವಗನ್, ಅಮೀರ್ ಖಾನ್ ಸಿನಿಮಾಗಳಿಗೆ ಸ್ಟಂಪ್ ಮಾಸ್ಟರ್ ಆಗಿ ಕೆಲಸ ಮಾಡಿರೋ ರವಿವರ್ಮಾ ಬಾಲಿವುಡ್ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಸೇರಿದಂತೆ ಸಾಕಷ್ಟು ಸ್ಟಾರ್ ನಟರ ಸಿನಿಮಾಗಳಿಗೆ ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗಷ್ಟೇ 'ಮಿಷನ್ ಮಜ್ನು' ಸಿನಿಮಾದ ಚಿತ್ರೀಕರಣ ಮುಗಿಸಿ, ಲಾಕ್ಡೌನ್ ವೇಳೆ ಬಿಡದಿ ಬಳಿ ಇರುವ ತೋಟದಲ್ಲಿ ಕೆಲಸ ಮಾಡುತ್ತಾ ಕಾಲ ಕಳೆದಿದ್ದಾರೆ.