ಮುಂಬೈ : ತಮ್ಮ ಸಹೋದರನ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಕಲಿ ವೈದ್ಯಕೀಯ ದಾಖಲೆ ಸೃಷ್ಟಿಸಿದ ಆರೋಪದಲ್ಲಿ ಮುಂಬೈ ಪೊಲೀಸರು ದಾಖಲಿಸಿದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ನಟ ಸುಶಾಂತ್ ಸಿಂಗ್ ಸಹೋದರಿಯರಾದ ಪ್ರಿಯಾಂಕ ಸಿಂಗ್ ಮತ್ತು ಮೀತು ಸಿಂಗ್ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಸುಶಾಂತ್ ಸಿಂಗ್ ಸಾವಿಗೆ ಸಂಬಂಧಪಟ್ಟಂತೆ ಡ್ರಗ್ ಜಾಲದ ನಂಟಿನ ಆರೋಪದಲ್ಲಿ ಜೈಲು ಸೇರಿರುವ ಸುಶಾಂತ್ ಸಿಂಗ್ ಪ್ರಿಯತಮೆ ರೇಹಾ ಚಕ್ರವರ್ತಿ ನೀಡಿದ ದೂರಿನ ಮೇರೆಗೆ ಬಾಂದ್ರಾ ಪೊಲೀಸರು ಸೆ.7 ರಂದು ಪ್ರಿಯಾಂಕ ಮತ್ತು ಮೀತು ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ವೈದ್ಯ ಡಾ. ತರುಣ್ ಕುಮಾರ್ ಮತ್ತು ಸುಶಾಂತ್ ಸಿಂಗ್ ಸಹೋದರಿಯರು ಸೇರಿ ನಕಲಿ ವೈದ್ಯಕೀಯ ದಾಖಲೆ ಸೃಷ್ಟಿಸಿದ್ದಾರೆ. ಇದು ನಾಕೋಟಿಕ್ ಡ್ರಗ್ ಆ್ಯಂಡ್ ಸೈಕೋಟ್ರಾಪಿಕ್ ಸಬ್ಸ್ಟ್ಯಾನ್ಸಸ್ ( ಎನ್ಡಿಪಿಎಸ್) ಕಾಯ್ದೆ 1985 ರ ಉಲ್ಲಂಘನೆಯಾಗಿದೆ ಎಂದು ರೇಹಾ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.
ನ್ಯಾಯಮೂರ್ತಿಗಳಾದ ಎಸ್.ಎಸ್ ಶಿಂಧೆ ಮತ್ತುಎಂ. ಎಸ್ ಕಾರ್ನಿಕ್ ಅವರನ್ನೊಳಗೊಂಡ ವಿಭಾಗೀಯ ಪೀಠ ಮಂಗಳವಾರ ಈ ಅರ್ಜಿಯನ್ನು ಕೈಗೆತ್ತಿಕೊಂಡಿತ್ತು ಮತ್ತು ಮುಂದಿನ ವಿಚಾರಣೆಯನ್ನು ಅಕ್ಟೋಬರ್ 13ಕ್ಕೆ ಮುಂದೂಡಿದೆ.