ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅಸಹಜ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಲಿಂಕ್ ಇದೆಯಾ ಎಂಬುದನ್ನು ತನಿಖೆ ನಡೆಸಲು ನಟಿ ರಿಯಾ ಚಕ್ರವರ್ತಿಯನ್ನು ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ) ತನ್ನ ಕಚೇರಿಗೆ ಕರೆಸಿಕೊಂಡಿದೆ.
ರಿಯಾ ಚಕ್ರವರ್ತಿಯನ್ನು ಕರೆತರಲು ಎನ್‌ಸಿಬಿ ತಂಡ ಆಕೆಯ ಮನೆಗೆ ತೆರಳಿತ್ತು. ಆದರೆ, ಅವರೊಂದಿಗೆ ಬರಲು ರಿಯಾ ನಿರಾಕರಿಸಿದ್ದು, ಪ್ರತ್ಯೇಕವಾಗಿ ಎನ್‌ಸಿಬಿ ಕಚೇರಿಗೆ ಆಗಮಿಸಿದ್ದಾರೆ. ಮುಂಬೈ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು, ರಿಯಾ ಚಕ್ರವರ್ತಿ ಸಹೋದರ ಶೋಯಿಕ್ ಚಕ್ರವರ್ತಿ ಮತ್ತು ಸುಶಾಂತ್ ಅವರ ಹೋಂ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ಅವರನ್ನು ಸೆಪ್ಟೆಂಬರ್ 9 ರವರೆಗೆ 4 ದಿನಗಳ ಕಾಲ ಎನ್‌ಸಿಬಿ ಕಸ್ಟಡಿಗೆ ನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ.
ರಿಯಾ ಸಹೋದರ ಮತ್ತು ಸೆ.5 ರಂದು ಬಂಧಿತನಾಗಿದ್ದ ಇನ್ನೋರ್ವ ವ್ಯಕ್ತಿ ದೀಪೇಶ್ ಸಾವಂತ್ ಜೊತೆ ರಿಯಾಳನ್ನು ಕೂರಿಸಿ ವಿಚಾರಣೆ ನಡೆಸಲು ಆಕೆಯನ್ನು ಕಚೇರಿಗೆ ಕರೆಸಿಕೊಳ್ಳುವುದಾಗಿ ಎನ್‌ಸಿಬಿ ನ್ಯಾಯಾಲಯಕ್ಕೆ ತಿಳಿಸಿತ್ತು. ಅದರಂತೆ ಇಂದು ಕಚೇರಿಗೆ ಕರೆಸಿಕೊಂಡಿದೆ.
ತನ್ನ ಪುತ್ರಿಯನ್ನು ಎನ್‌ಸಿಬಿ ಕರೆಸಿಕೊಂಡಿರುವುದನ್ನು ಬಗ್ಗೆ ರಿಯಾ ತಂದೆ ಲೆಫ್ಟಿನೆಂಟ್ ಕರ್ನಲ್ (ನಿವೃತ್ತ) ಇಂದ್ರಜಿತ್ ಚಕ್ರವರ್ತಿ ಖಂಡಿಸಿದ್ದು, "ಅಭಿನಂದನೆಗಳು ಭಾರತ, ನೀವು ನನ್ನ ಮಗನನ್ನು ಬಂಧಿಸಿದ್ದೀರಿ. ಮುಂದಿನ ಸಾಲಿನಲ್ಲಿ ನನ್ನ ಮಗಳು ಎಂದು ನನಗೆ ಖಾತ್ರಿಯಿದೆ ಮತ್ತು ಅದರ ನಂತರ ಯಾರು ಎಂದು ನನಗೆ ತಿಳಿದಿಲ್ಲ. ನೀವು ಮಧ್ಯಮ ವರ್ಗದ ಕುಟುಂಬವನ್ನು ಪ್ರಕರಣದಲ್ಲಿ ಸಿಲುಕಿಸಿದ್ದೀರಿ. ಆದರೆ, ನ್ಯಾಯದ ದೃಷ್ಟಿಯಿಂದ ಎಲ್ಲವೂ ಸಮರ್ಥನೀಯವಾಗಿದೆ. ಜೈ ಹಿಂದ್" ಎಂದಿದ್ದಾರೆ.
ರಿಯಾ ಪರ ವಕೀಲ ಸತೀಶ್ ಮಾನೆ ಶಿಂಧೆ ಪ್ರತಿಕ್ರಿಯಿಸಿ, ಇದೊಂದು ಮೋಸದ ಬೇಟೆಯಾಗಿರುವುದರಿಂದ ರಿಯಾ ಬಂಧನಕ್ಕೊಳಗಾಗಲು ಸಿದ್ಧರಿದ್ದಾರೆ. ಒಬ್ಬ ನಿರಪರಾಧಿಯಾಗಿ ಯಾರಾದರೊಬ್ಬರನ್ನು ಪ್ರೀತಿಸುವುದು ಅಪರಾಧವಾದರೆ, ಅದರ ಪರಿಣಾಮಗಳನ್ನು ಅವರು ಎದುರಿಸಬೇಕಾಗುತ್ತದೆ. ಬಿಹಾರ ಪೊಲೀಸರು, ಸಿಬಿಐ, ಇಡಿ ಮತ್ತು ಈಗ ಎನ್‌ಸಿಬಿ ಯಾವುದೆಲ್ಲ ಪ್ರಕರಣಗಳನ್ನು ರಿಯಾ ಮೇಲೆ ಹೊರಿಸಿದೆಯೋ ಅದ್ಯಾವುದಕ್ಕೂ ನಿರೀಕ್ಷಣ ಜಾಮೀನು ಪಡೆಯಲು ನಾವು ಯಾವುದೇ ನ್ಯಾಯಾಲಯಕ್ಕೆ ಹೋಗಿಲ್ಲ ಎಂದಿದ್ದಾರೆ.