ಬಾಲಿವುಡ್ ನಟಿ ಶಬಾನಾ ಆಜ್ಮಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಇಂದು ಮಧ್ಯಾಹ್ನ ರಾಯಗಢ ಜಿಲ್ಲೆಯ ಖೊಪೊಲಿ ಬಳಿಯ ಮುಂಬೈ -ಪುಣೆ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಈ ಘಟನೆ ಜರುಗಿದ್ದು ಶಬಾನಾ ಅಪಾಯದಿಂದ ಪಾರಾಗಿದ್ದಾರೆ.
ಇಂದು ಮಧ್ಯಾಹ್ನ 3.30 ಕ್ಕೆ ಅಪಘಾತ ಸಂಭವಿಸಿದ್ದು ಶಬಾನಾ ಚಲಿಸುತ್ತಿದ್ದ ಕಾರು ಟ್ರಕ್ಗೆ ಡಿಕ್ಕಿ ಹೊಡೆದ ಕಾರಣ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ನಟಿಯ ಹಣೆ, ಕಣ್ಣು, ಮೂಗಿನ ಭಾಗಕ್ಕೆ ಪೆಟ್ಟು ಬಿದ್ದಿದ್ದು ಅಪಾಯದಿಂದ ಪಾರಾಗಿದ್ದಾರೆ. ಕೂಡಲೇ ಸ್ಥಳೀಯರು ಶಬಾನಾ ಅವರನ್ನು ಕಾರಿನಿಂದ ಹೊರ ಕರೆತಂದು ಎಂಜಿಎಂ ಆಸ್ಪತ್ರೆ ದಾಖಲಿಸಲಾಗಿತ್ತು. ವಿಷಯ ತಿಳಿದ ಕೂಡಲೇ ಶಬಾನಾ ಆಜ್ಮಿ ಅವರ ಪತಿ ಜಾವೇದ್ ಅಖ್ತರ್ ಎಂಜಿಎಂ ಆಸ್ಪತ್ರೆಗೆ ಧಾವಿಸಿದ್ದಾರೆ. ಎಂಜಿಎಂ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮುಂಬೈ ಅಂಧೇರಿಯ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಶಬಾನಾ ಆಜ್ಮಿ ಬಾಲಿವುಡ್ ನಟಿ ಮಾತ್ರವಲ್ಲ ಸಾಮಾಜಿಕ ಕಾರ್ಯಕರ್ತೆಯಾಗಿ ಕೂಡಾ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಖ್ಯಾತ ಕವಿ ಹಾಗೂ ಬಾಲಿವುಡ್ ಬರಹಗಾರ ಜಾವೇದ್ ಅಖ್ತರ್ ಶಬಾನಾ ಅವರ ಪತಿ. ಶಬಾನಾ ಅವರನ್ನು ಭೇಟಿಯಾಗಲು ಬಾಲಿವುಡ್ ಗಣ್ಯರು ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ಅವರು ಶೀಘ್ರ ಗುಣಮುಖರಾಗಲೆಂದು ಅಭಿಮಾನಿಗಳು ಕೂಡಾ ಹಾರೈಸಿದ್ದಾರೆ.